ಹುಬ್ಬಳ್ಳಿ: ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಸುದ್ದಿ ಹುಸಿ ಎಂಬುದು ಸ್ಪಷ್ಟವಾಗಿದೆ. ಬಾಂಬ್ ಸ್ಫೋಟವೇನು ಆಗಿಲ್ಲ. ಇಂತಹ ಕರೆಗಳು ಬರುತ್ತವೆ. ಬಾಂಬ್ ಕರೆ ಹುಸಿ ಎಂದ ಬಳಿಕವೂ ಆ ವಿಷಯವನ್ನೇ ಹಿಡಿದು ಜಗ್ಗಾಡುವುದು ಯಾಕೆ ಎಂದು ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನು ಆಗಿಲ್ಲ ಅಂತಾ ನಿನ್ನೆಯೇ ಸ್ಪಷ್ಟವಾಗಿದೆ. ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ? ಅದಕ್ಕೆ ಸರ್ಕಾರ, ಪೊಲೀಸ್ ಇಲಾಖೆ ಇದೆ.
ಅದನ್ನು ತನಿಖೆ ಮಾಡಿಯೇ ಮಾಡುತ್ತಾರೆ. ಬೇರೆ ಸಮಸ್ಯೆಗಳು ಸಾಕಷ್ಟಿವೆ. ಇಂತಹ ವಿಷಯಗಳ ಬಗ್ಗೆ ಅನಗತ್ಯ ಭೀತಿ ಹುಟ್ಟಿಸಿದರೆ ಜನ ಗೊಂದಲಕ್ಕೆ ಸಿಲುಕುತ್ತಾರೆ ಎಂದರು. ಲೋಕಸಭಾ ಚುನಾವಣೆ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಮ್ಮ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕಳುಹಿಸಿದ ನಂತರ ಅದನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ ಎಂದರು. ಬೆಳಗಾವಿಯಲ್ಲಿನ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ, ಬರಗಾಲದ ಚರ್ಚೆ ಆಗುತ್ತದೆ. ಶಾಸಕರು ತಮ್ಮ ಕ್ಷೇತ್ರದ್ದು ಅಥವಾ ಜಿಲ್ಲೆಯದ್ದು ಚರ್ಚೆ ಮಾಡಿದರೆ ಅದಕ್ಕೆ ಸರ್ಕಾರ ಉತ್ತರ ಕೊಡುತ್ತದೆ ಎಂದರು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಮಲೆನಾಡ ಶಾಲಾ ಮಕ್ಕಳ ಅನುಕೂಲಕ್ಕೆ ಲೋಕೋಪಯೋಗಿ ಇಲಾಖೆಯಿಂದ ಕಾಲುಸಂಕವೆಂದು 100 ಕಿರುಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನು 400 ಮಾಡುತ್ತೇವೆ. ಲೋಕೋಪಯೋಗಿ ಇಲಾಖೆಯ ಬಿಲ್ ಬಾಕಿ ಇದೆ. ಅದಕ್ಕೆ ನಾವು ಹೊಣೆಗಾರರಲ್ಲ. ಕೊಡುವ ಜವಾಬ್ದಾರಿ ನಮ್ಮದಿದೆ. ಹಿಂದಿನ ಬಿಜೆಪಿ ಸರಕಾರ 4000 ಕೋಟಿ ರೂ.ಗೂ ಹೆಚ್ಚಿಗೆ ಬಾಕಿ ಇರಿಸಿದೆ. ಅದನ್ನು ನಾವು ಎಲ್ಲಿಂದ ತರುವುದು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವೇತನ ಆಗುತ್ತಿಲ್ಲವೆಂದು ಯಾರು ಹೇಳಿದರು ಎಂದು ಪ್ರಶ್ನಿಸಿದರು.
ಬೆಳಗಾವಿ ರಾಜಕಾರಣದಲ್ಲಿ ಯಾರು ಮೂಗು ತೂರಿಸುತ್ತಿದ್ದಾರೆ? ನಾವು ಹೊಂದಾಣಿಕೆಯಿಂದ ಇದ್ದೇವೆ. ಮುಂದೆ ಏನಾದರೂ ಕೂಡ ನಾವು ಅದನ್ನು ಚರ್ಚೆ ಮಾಡಿ ಬಗೆಹರಿಸುತ್ತೇವೆ. ಅದರ ಬಗ್ಗೆ ಸಭೆ ಮಾಡಿ ನಾವು ಹೈಕಮಾಂಡ್ ಗೆ ಪಟ್ಟಿ ಕೊಡುತ್ತೇವೆ ಎಂದರು. ತೆಲಂಗಾಣ ಚುನಾವಣೆ ವೇಳೆ ಕರ್ನಾಟಕದ ಪ್ರಭಾವಿ ಸಚಿವ ಮತ್ತು ಗೋವಾ ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇವರೇನು ಶತ್ರುಗಳಲ್ಲ. ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಹೋಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿರುತ್ತಾರೆ.
ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎರಡು ತಾಸು ಏಕೆ ಇಡೀ ರಾತ್ರೀನೆ ಅವರು ಚರ್ಚಿಸಿರಬಹುದು. ಗೆಳೆತನ ಇದ್ದೆ ಇರುತ್ತದೆ. ಗೋವಾ ಮತ್ತು ಕರ್ನಾಟಕಕ್ಕೆ ಮೊದಲಿಂದಲೂ ಸ್ನೇಹವಿದೆ. ಗೆಳೆತನದಿಂದಾಗಿ ಒಬ್ಬರಿಗೊಬ್ಬರು ಭೇಟಿಯಾಗಿರುತ್ತಾರೆ. ರಾಜ್ಯದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಸ್ನೇಹಿತರಿದ್ದಾರೆ. ಆ ಪಕ್ಷದವರು ನಮ್ಮನ್ನು ಭೇಟಿಯಾಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು. ಸಚಿವರು ಮತ್ತು ಶಾಸಕರ ನಡುವೆ ತಾಳ ಮೇಳ ಇಲ್ಲದ ವಿಚಾರವಾಗಿ ಮಾತನಾಡಿದ ಅವರು, ನೋಡೋಣ ಅಧಿವೇಶನ ಬಂದಿದೆ. ಈ ವೇಳೆ ಅದಕ್ಕೆ ಉತ್ತರ ಸಿಗುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.ಶಾಸಕ ಎನ್ ಎಚ್ ಕೋನರಡ್ಡಿ, ಅಬ್ಬಯ್ಯಾ ಪ್ರಸಾದ್ ಮುಂತಾದವರಿದ್ದರು.