ರಾಯಚೂರು:- ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗುತ್ತದೆ. ಈ ಹಿಂದೆ ಬರ ಪರಿಹಾರ, ಅತೀವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಇಡದಿದ್ದರೂ ಅವರಿಗೂ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ ಎಂದರು.
ಹಿಂದಿನ ಸರ್ಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ನೋಡಿದ್ದೇನೆ. ಯಾರದ್ದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿತ್ತಿತ್ತು. ರೈತರ ಬೆಳೆಯೇ ಬೇರೆ ಪರಿಹಾರ ಬರುವುದೇ ಬೇರೆ ಬೆಳೆಗೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲಾ ಸರಿಮಾಡಿ ಬೆಳೆಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ ಎಂದರು.
ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರುತ್ತದೆ. 12 ಲಕ್ಷ ಜನರಿಗೆ ಆರ್ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.