ದೆಹಲಿ: ಭಾರತದಲ್ಲಿ ಚಾಲಕ ರಹಿತ ಕಾರುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಐಐಎಂ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್) ನಾಗ್ಪುರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, “ಭಾರತದಲ್ಲಿ ಯಾವುದೇ ಕಾರಣಕ್ಕೂ ಚಾಲಕ ರಹಿತ ಕಾರುಗಳ ಪ್ರವೇಶಕ್ಕೆ ನಮ್ಮ ಸರಕಾರ ಅನುಮತಿ ನೀಡುವುದಿಲ್ಲ. ಈ ಬಗ್ಗೆ ಹಿಂದೆಯೂ ನಾನು ಅಮೆರಿಕದಲ್ಲಿಯೇ ಹೇಳಿದ್ದೇನೆ. ಏಕೆಂದರೆ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಡ್ರೈವರ್ಗಳಾಗಿ ಕೆಲಸ ಮಾಡುತ್ತಾರೆ. ಡ್ರೈವರ್ಲೆಸ್ ಕಾರ್ಗಳು ಅವರ ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಮತ್ತು ಅದು ಮತ್ತೊಂದು ಸಮಸ್ಯೆ ಸೃಷ್ಟಿ ಮಾಡಲಿದೆ. ಡ್ರೈವರ್ ರಹಿತ ವಾಹನಗಳು ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಿಗೆ ಮಾತ್ರ ಸೂಕ್ತವಾಗಿವೆ,” ಎಂದು ತಿಳಿಸಿದ್ದಾರೆ.
ಸಚಿವ ನಿತಿನ್ ಗಡ್ಕರಿ ಅವರು ಜುಲೈ 2017 ಮತ್ತು ಡಿಸೆಂಬರ್ 2019ರಲ್ಲಿಯೂ ದೇಶದಲ್ಲಿ ಚಾಲಕ ರಹಿತ ಕಾರುಗಳನ್ನು ಹೊಂದುವ ಕಲ್ಪನೆಗೆ ಎರಡು ಬಾರಿ ಸಾರ್ವಜನಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದರು.