ಬೆಂಗಳೂರು:- ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗಗಳ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆಯಸಿಡ್ ಎರಚಿರುವ ಆಘಾತಕಾರಿ ಘಟನೆ ನಡೆದಿದೆ.
ಆರೋಪಿಯು ಇದೇ ವರ್ಷ ಮೇ 19 ರಂದು 23 ವರ್ಷದ ಸಂತ್ರಸ್ತೆಯನ್ನು ವಿವಾಹವಾಗಿದ್ದ. ಆರೋಪಿಯು ಮದ್ಯವ್ಯಸನಿಯಾಗಿದ್ದು, ಅಪರೂಪಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ. ಬದಲಾಗಿ ಪತ್ನಿಯಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದು, ಪದೇ ಪದೇ ಜಗಳವಾಗುತ್ತಿತ್ತು. ನಿತ್ಯವೂ ಕುಡಿದ ಅಮಲಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಆರೋಪಿ ತನ್ನ ಹೆಂಡತಿಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಆಗಾಗ ತಲೆಗೂದಲು ಹಿಡಿದು ಎಳೆದಾಡುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮನೆ ಬಾಡಿಗೆ ಪಾವತಿಸದ ಕಾರಣ, ತಮ್ಮನ್ನು ಅವರ ನಿವಾಸದಿಂದ ಹೊರಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಆರೋಪಿಯು ಆಕೆಯ ಬೆನ್ನು ಮತ್ತು ಖಾಸಗಿ ಭಾಗಗಳ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆಯಸಿಡ್ ಸುರಿದಿದ್ದಾನೆ. ಇದರಿಂದಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.