ಧಾರ್ಮಿಕ ನಂಬಿಕೆಯ ಪ್ರಕಾರ ಶನಿವಾರದಂದು ಶನಿದೇವರ ನಿಯಮಿತ ಆರಾಧನೆ ಯು ಜೀವನದಲ್ಲಿ ಪ್ರಯೋಜನಗಳನ್ನು ತರುತ್ತದೆ. ಶನಿಯು ಎಲ್ಲಾ ಜನರಿಗೆ ಅವರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವನ್ನು ನೀಡುತ್ತಾನೆ. ಕೆಟ್ಟ ಕೆಲಸಗಳನ್ನು ಮಾಡಿದರೆ ಆತ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಕೆಟ್ಟ ಕೆಲಸ ಮಾಡಿದ ಜನರು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ. ಶನಿಯನ್ನು ಪೂಜಿಸಲು ಶನಿವಾರವು ಅತ್ಯುತ್ತಮ ದಿನವಾಗಿದೆ.
ಕಪ್ಪು ಎಳ್ಳು
ಶನಿ ದೇವನ ಪೂಜೆಯಲ್ಲಿ ಕಪ್ಪು ಎಳ್ಳಿನ ತೈಲದ ದಾನವನ್ನು ಮಾಡಲಾಗುತ್ತದೆ. ಇದಲ್ಲದೇ ಅಶ್ವತ್ಥ ವೃಕ್ಷದ ಕೆಳಗೆಯೂ ಎಳ್ಳಿನ ದೀಪವನ್ನು ಹಚ್ಚುವ ಪದ್ಧತಿ ಇದೆ. ಆದರೆ ಶನಿವಾರದಂದು ಕಪ್ಪು ಎಳ್ಳನ್ನು ಎಂದಿಗೂ ಖರೀದಿಸಬಾರದು ಎನ್ನುವುದು ನಿಮಗೆ ತಿಳಿದಿರಲಿ. ಇದರಿಂದ ಶನಿಯು ಕೋಪಗೊಳ್ಳಬಹುದು ಹಾಗೂ ನಿಮ್ಮ ಎಲ್ಲಾ ಕೆಲಸದಲ್ಲಿಯೂ ಅಡೆತಡೆಗಳು ಉಂಟಾಗಬಹುದು. ನಡೆಯಬೇಕಾದ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಬಹುದು.
ಇದನ್ನು ಕೇವಲ ದಾನ ಮಾಡಿ
ಸಾಸಿವೆ ಎಣ್ಣೆಯನ್ನು ಶನಿವಾರ ದಾನ ಮಾಡುವುದು ಒಳ್ಳೆಯದು. ಆದರೆ ಶನಿವಾರ ಸಾಸಿವೆ ಎಣ್ಣೆಯನ್ನು ಖರೀದಿಸುವುದು ಅತ್ಯಂತ ಅಶುಭ. ಈ ದಿನ ತೈಲವನ್ನು ಖರೀದಿಸಿದರೆ ಮನೆಯಲ್ಲಿ ನಕಾರಾತ್ಮಕತೆಯು ಹೆಚ್ಚಾಗುವುದೆಂಬ ನಂಬಿಕೆ ಇದೆ. ಅದಾಗ್ಯೂ ಶನಿವಾರ ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಶ್ವಾನಗಳಿಗೆ ನೀಡುವುದರ ಮೂಲಕ ಶನಿಯ ಕೆಟ್ಟ ದೃಷ್ಟಿ ನಿವಾರಣೆಯಾಗುವು. ಸಾಸಿವೆ ಎಣ್ಣೆ ಮಾತ್ರವಲ್ಲದೇ, ಯಾವುದೇ ರೀತಿಯ ಎಣ್ಣೆಯನ್ನೂ ಈ ದಿನ ಖರೀದಿಸಬಾರದು. ಇದು ಮನೆಯಲ್ಲಿ ಕುಟುಂಬ ಸದಸ್ಯರ ಅನಾರೋಗ್ಯಕ್ಕೆ ಕಾರಣವಾಗಬಹುದು.
ಈ ವಸ್ತುಗಳನ್ನು ಖರೀದಿಸಬೇಡಿ
ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರ ಖರೀದಿಸಬಾರದು. ಈ ದಿನ ಖರೀದಿಸಿದರೆ ಶನಿದೇವನ ಕೋಪಕ್ಕೆ ತುತ್ತಾಗಬೇಕಾದೀತು. ಆದರೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದಕ್ಕಾಗಿ ಈ ದಿನ ವಿಶೇಷ ಮಹತ್ವ ಪಡೆದಿದೆ. ಇದರಿಂದ ಶನಿದೇವನ ವಿಶೇಷ ಅನುಗ್ರಹವನ್ನೂ ಪಡೆಯಬಹುದು, ಆದರೆ ಈ ವಸ್ತುವನ್ನು ಖರೀದಿಸಿದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಉಪ್ಪು ಖರೀದಿ
ನೀವು ಉಪ್ಪು ಖರೀದಿಸಲು ಬಯಸಿದರೆ, ಶನಿವಾರದ ಬದಲು ಇನ್ನೊಂದು ದಿನ ಖರೀದಿಸುವುದು ಉತ್ತಮ. ಶನಿವಾರ ಉಪ್ಪು ಖರೀದಿಸುವುದರಿಂದ ಶನಿದೇವನು ಕೋಪಗೊಳ್ಳುತ್ತಾನೆ. ಮತ್ತು ವ್ಯಕ್ತಿಯ ಮೇಲಿನ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುವುದು ಎಂಬ ನಂಬಿಕೆ ಇದೆ. ಇದಲ್ಲದೇ ಆರೋಗ್ಯ ಸಮಸ್ಯೆಗಳೂ ಬಾಧಿಸಬಹುದು.
ಕತ್ತರಿ ಖರೀದಿ
ಟೈಲರ್ ಅಂಗಡಿಯವರು, ಬುಟೀಕ್ ಅಂಗಡಿಯವರು ಶನಿವಾರದ ದಿನ ಕತ್ತರಿಯನ್ನು ಖರೀದಿಸುವುದಿಲ್ಲ. ಇವರಂತೆಯೇ, ಸಾಮಾನ್ಯ ಜನರೂ ಕೂಡಾ ಶನಿವಾರ ಕತ್ತರಿ ಖರೀದಿಸಬಾರದು. ಇದು ಶನಿದೇವನನ್ನು ಅಸಮಾಧಾನಗೊಳಿಸುತ್ತದೆ. ಪರಸ್ಪರ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಹಾಗೂ ಅಂತರವು ಹೆಚ್ಚಾಗಲು ಪ್ರಾರಂಭವಾಗುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದ ಮರೆತು ಹೋದರೂ ಶನಿವಾರದಂದು ಕತ್ತರಿ ಮಾತ್ರ ಖರೀದಿಸಲು ಹೋಗಬೇಡಿ.