ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಉಲ್ಬಣಿಸುತ್ತಿದ್ದು, ಈ ಸಂಬಂಧ ಬಿಜೆಪಿ ಕಛೇರಿಯಲ್ಲಿ ಶಾಸಕರು ಜಂಟಿ ಪತ್ರಿಕಾಗೋಷ್ಟಿ ನಡೆಸಿ ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿದ ಅರವಿಂದ್ ಲಿಂಬಾವಳಿ, ಕೊರೋನಾ ತಾರಕಕ್ಕೆ ಏರುವ ಸಂದರ್ಭದಲ್ಲಿ ಅನಿವಾರ್ಯವಾಗಿ ಬೆಂಗಳೂರು ಶಾಸಕರು ಸುದ್ದಿಗೋಷ್ಠಿ ಮಾಡಬೇಕಿದೆ. ಬೆಂಗಳೂರಿನಲ್ಲಿ ಮೂರನೇ ಅಲೆ, ವಿಶೇಷವಾಗಿ ಓಮಿಕ್ರಾನ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ.

ಮಂಗಳವಾರದ ವರದಿಯಂತೆ 15 ಸಾವಿರ ಪ್ರಕರಣ ದಾಖಲಾಗಿದೆ. ಸರ್ಕಾರ ಮತ್ತು ನಮ್ಮ ಪಕ್ಷ ಕೊರೋನಾ ತಡೆಯೋ ಕೆಲಸ ಮಾಡ್ತಿದೆ. ಆದ್ರೆ ಕಾಂಗ್ರೆಸ್ ಮಾತ್ರ ಮೇಕೆದಾಟು ಯಾತ್ರೆ ಮಾಡುತ್ತಿದೆ. ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ಸರ್ಕಾರ, ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚು ಕೆಲಸ ಮಾಡಿದೆ.
ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸದ್ಯದಲ್ಲಿ ಕಾಂಗ್ರೆಸ್ ಪಾದಯಾತ್ರೆಗಿಂತ, ಕೊರೋನಾ ತಡೆಗಟ್ಟೋದು ಮುಖ್ಯ ಆಗಿದೆ. ತಿಳುವಳಿಕೆ ಇರೋ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ ದಯವಿಟ್ಟು ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.