ಬೆಂಗಳೂರು:- ಹೋಮ-ಹವನ ಮಾಡ್ತಿರೋದು ದರ್ಶನ್ ಗಾಗಿ ಅಲ್ಲ ಎಂದು ಹೇಳುವ ಮೂಲಕ ಸುಳ್ಳು ಸುದ್ದಿಗಳಿಗೆ ರಾಕ್ಲೈನ್ ವೆಂಕಟೇಶ್ ತೆರೆ ಎಳೆದಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ಆ. 13 ಮತ್ತು 14 ರಂದು ಚಿತ್ರೋದ್ಯಮದ ಒಳಿತಿಗಾಗಿ ಕಲಾವಿದರ ಸಂಘದಿಂದ ಹೋಮ-ಹವನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಲಾವಿದರ ಸಂಘದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಸಾಕಷ್ಟು ಸಾವು, ನೋವು ಎಲ್ಲಾ ಸಂಭವಿಸಿದೆ. ಚಿತ್ರರಂಗದಲ್ಲೂ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಪೂಜೆ ಮಾಡೋಣ ಅಂತ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ
ಸಾಮಾನ್ಯವಾಗಿ ಎಲ್ಲರಿಗೂ ಒಂದು ಆಮಂತ್ರಣ ಕೊಡುತ್ತೀವಿ. ಆದರೆ ಇಲ್ಲಿ ಯಾರಿಗೂ ಇನ್ವಿಟೇಷನ್ ಕೊಡಲ್ಲ. ನಾವು ಅನೇಕ ಸಲ ಜನರ ಬಳಿ ಮನವಿ ಮಾಡಿದ್ದೇವೆ, ಇವತ್ತಿನ ಚಿತ್ರರಂಗದ ಪರಿಸ್ಥಿತಿ ಏನಾಗುತ್ತಿದೆ ಅನ್ನೋದು ಗೊತ್ತಿದೆ. ಹಿಂದೆ ಎಲ್ಲಾ ಭಾಷೆಯ ಚಿತ್ರ ಬಿಡುಗಡೆ ಆಗುತ್ತಿದ್ದದ್ದು ಕಡಿಮೆ. ಇವತ್ತು ಸುನಾಮಿ ತರ ಎಲ್ಲಾ ಚಿತ್ರಗಳು ಬರುತ್ತಿವೆ. ಎಲ್ಲಾ ಭಾಷೆಯ ಸೂಪರ್ ಡೂಪರ್ ಚಿತ್ರ ತಂದು ರಿಲೀಸ್ ಮಾಡುತ್ತಾರೆ. ಇದು ವ್ಯಾಪಾರ, ಅದರ ಬಗ್ಗೆ ನಾನು ಮಾತಾಡಲ್ಲ. ಇವತ್ತು ಕನ್ನಡ ಚಿತ್ರರಂಗ ಪಾತಾಳಕ್ಕೆ ಹೋಗುತ್ತಿದೆ. ಅದನ್ನು ಉಳಿಸಿಕೊಳ್ಳುವುದಕ್ಕೆ ಈ ಪೂಜೆ ಮಾಡುತ್ತಿದ್ದೇವೆ ಎಂದರು.
ದರ್ಶನ್ ವಿಚಾರಕ್ಕೆ ಪೂಜೆ, ಹೋಮ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ದರ್ಶನ್ಗಾಗಿ ನೂರು ದೇವಸ್ಥಾನದಲ್ಲಿ ಹೋಗಿ ಪೂಜೆ ಮಾಡುತ್ತೇನೆ. ಅದಕ್ಕೆ ಇಲ್ಲೇ ಬಂದು ಪೂಜೆ ಮಾಡಬೇಕಾಗಿಲ್ಲ. ದರ್ಶನ್ಗೋಸ್ಕರ ನನ್ನ ಮನೆಯಲ್ಲೇ ಪೂಜೆ ಮಾಡಿಸುವೆ, ಇಲ್ಲವಾದರೆ ದರ್ಶನ್ ಮನೆಯಲ್ಲೇ ಪೂಜೆ ಮಾಡಿಸುತ್ತೇನೆ. ಉದ್ದೇಶ ದರ್ಶನ್ಗೆ ಮಾತ್ರ ಒಳ್ಳೆದಾಗಲಿ ಅನ್ನೋದಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ತಪ್ಪು-ಸರಿ ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದರು.
ದರ್ಸನ್ ಕೂಡ ನಮ್ಮ ಕುಟುಂಬದ ಸದಸ್ಯರೇ. ಅವರಿಗಾಗಿಯೇ ಪೂಜೆ ಮಾಡುತ್ತಿದ್ದೇವೆ ಅಂತ ನೀವು ಅಂದುಕೊಂಡರೆ ಅದು ತಪ್ಪು ಕಲ್ಪನೆ, ಪಾತಾಳಕ್ಕೆ ಹೋಗುತ್ತಿರುವ ಚಿತ್ರತಂಗ ಹೇಗೆ ಉಳಿಸಬೇಕು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವ್ ಯಾವ ಕಾರ್ಮಿಕರಿಗೆ ಊಟ ಹಾಕುತ್ತಿಲ್ಲ. ಹೊಸದಾಗಿ ಬಂದಿರುವ 250 ನಿರ್ಮಾಪಕರನ್ನು ಉಳಿಸಿಕೊಕೊಳ್ಳಬೇಕು. ಇಲ್ಲವೆಂದರೆ ಇನ್ನೆರಡು ಮೂರು ವರ್ಷದಲ್ಲಿ ಕೇವಲ 30 ರಿಂದ 40 ಸಿನಿಮಾ ಆದರೆ ಅಚ್ಚರಿ ಇಲ್ಲ ಎಂದರು.