ಬೆಂಗಳೂರು:– ಗಾಣಿಗ ಜಾತಿಯ ಪ್ರಧಾನಿ ಮೋದಿಗೆ ಗಾಣಿಗರ ಸಮಸ್ಯೆ ಗೊತ್ತಿಲ್ಲವೇ? ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗಾಣಿಗ ಸಮುದಾಯಕ್ಕೆ ಸೇರಿದವರಾದ ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಪ್ರಧಾನಿಯಾಗಿದ್ದಾರೆ. ಆದರೂ ವಿಶ್ವಕರ್ಮ ಯೋಜನೆಯಲ್ಲಿ ಎಣ್ಣೆ ಉತ್ಪಾದನಾ ಘಟಕಗಳನ್ನು ಕೈಬಿಟ್ಟಿದ್ದಾರೆ. ನಿಮ್ಮ ಪ್ರಧಾನಿಗೆ ನಿಮ್ಮ ಸಮಸ್ಯೆ ಗೊತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಶ್ವಕರ್ಮ ಯೋಜನೆಯಲ್ಲಿ ಗಾಣಗಳನ್ನು ಕೈಬಿಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಗಾಣಗಳನ್ನೂ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಶೀಘ್ರದಲ್ಲೇ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ಭರವಸೆ ನೀಡಿದರು.
ಸಾಮಾಜಿಕ ನ್ಯಾಯ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಯಾರು ಏನೇ ಹೇಳಿದರೂ ರಾಜಿಯಾಗದೇ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು
ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಅದರಲ್ಲೂ ಸಣ್ಣ ರೈತರು ಮಾತ್ರ ಇದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಗಾಣಿಗ ನಿಗಮ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.