ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ರೈತರ ಜಮೀನಿಗೆ ಕಾಲುದಾರಿ ಅಥವಾ ಎತ್ತಿನಬಂಡಿ ಹೋಗುವ ದಾರಿಯಿದ್ದರೂ ಸಹ ರೈತರಿಗೆ ಗೊತ್ತಿರುವುದಿಲ್ಲ. ಇದೆಲ್ಲಾ ಯಾಕೆ ಈಗ ಹೇಳ್ತಾ ಇದ್ದೀವಿ ಅಂತೀರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತದೆ. ರೈತರಿಗೆ ಅನುಕೂಲವಾಗುವಂತಹ ಸುತ್ತೋಲೆ ಒಂದನ್ನು ರಾಜ್ಯ ಸರ್ಕಾರ ಹೊರಡಿಸಿದ್ದು ಇನ್ನು ಮುಂದೆ ಯಾವುದೇ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ದಾರಿ ಮಾಡಿ ಕೊಡಲು ಸರ್ಕಾರವು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿದೆ.
ರೈತರು ವ್ಯವಸಾಯ ಉದ್ದೇಶಕ್ಕಾಗಿ ಖಾಸಗಿ ಜಮೀನಿನಲ್ಲಿ ತಿರುಗಾಡವುದಿದ್ದರೂ ಅವರಿಗೆ ಕಾಲುದಾರಿ ಅಥವಾ ಬಂಡಿದಾರಿ ಮಾಡಿಕೊಡಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರೈತರು ಎಷ್ಟೋ ಬಾರಿ ತಮ್ಮ ಜಮೀನಿಗೆ ಬೇರೆ ಜಮೀನಿನ ಮೂಲಕ ಹಾದು ಹೋಗಬೇಕು, ಇಂತಹ ಸಂದರ್ಭದಲ್ಲಿ ಕೃಷಿಗೆ ಅಗತ್ಯ ಇರುವ ಸಲಕರಣೆಗಳನ್ನು ಕೊಂಡೊಯ್ಯುವುದು ಬಹಳ ಕಷ್ಟ, ದಾರಿಯೇ ಇಲ್ಲದಿದ್ದರೆ ಜಮೀನಿಗೆ ಹೋಗುವುದು ಹೇಗೆ? ಎನ್ನುವ ಸಮಸ್ಯೆ ಉದ್ಭವಿಸುತ್ತದೆ. ಈ ಎಲ್ಲ ಸಮಸ್ಯೆಗಳನ್ನೂ ಅರಿತು ಸರ್ಕಾರ ಈ ಕೆಳಗಿನ ಕ್ರಮಕ್ಕೆ ಮುಂದಾಗಿದೆ.
ಇದುವರೆಗೆ ಕಾಲುದಾರಿ ಅಥವಾ ಜಮೀನಿಗೆ ಹೋಗಲು ಬೇಕಾಗಿರುವ ಸಣ್ಣ ದಾರಿಯ ವಿಚಾರವಾಗಿಯೂ ಹಲವು ರೈತರ ನಡುವೆ ಮನಸ್ತಾಪ, ಜಗಳಗಳು ಮತ್ತು ಮಾರಾಮಾರಿಯು ಕೂಡ ನಡೆದಿವೆ. ಖಾಸಗಿ ಜಮೀನು ಹೊಂದಿರುವವರು ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಮಾಡಿಕೊಡಲು ಅವಕಾಶ ನೀಡದೆ ಇರುವ ಪರಿಣಾಮ ರೈತರು ತಮ್ಮ ಜಮೀನಿನಲ್ಲಿ ಬೆಳೆದು ಸರಿಯಾಗಿ ಸಾಗಿಸಲು ಆಗದೆ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂಬುದನ್ನು ಸರ್ಕಾರ ಮನಗೊಂಡಿದೆ.
ಒಬ್ಬ ವ್ಯಕ್ತಿಯ ಜಮೀನು, ಆತನ ಜಮೀನಿಗೆ ಹೋಗುವ ದಾರಿ ಮೊದಲಾದವು ಗ್ರಾಮ ನಕಾಶೆಯಲ್ಲಿ ತೋರಿಸಲಾಗಿರುತ್ತದೆ. ಆದರೆ ಅದೆಷ್ಟೋ ಬಾರಿ ವೈಯಕ್ತಿಕ ದ್ವೇಷ, ಮನಸ್ತಾಪಗಳಿಂದಾಗಿ ರೈತರು ಅನಾದಿಕಾಲದಿಂದ ಬಳಸುತ್ತಿದ್ದ ಕಾಲುದಾರಿಗಳನ್ನು ಮುಚ್ಚುವುದು, ಆ ಜಾಗದಲ್ಲಿ ತಿರುಗಾಡದಂತೆ ಮಾಡುವುದು ಇಂತಹ ಸಮಸ್ಯೆಗಳು ಸಾಕಷ್ಟು ಬಾರಿ ಉದ್ಭವಿಸುತ್ತದೆ. ಆದರೆ ಈ ರೀತಿ ಕೃಷಿ ಚಟುವಟಿಕೆಗೆ ತೊಂದರೆ ಕೊಡದಂತೆ ಸರ್ಕಾರ ಮುಂಜಾಗ್ರತೆ ವಹಿಸುತ್ತಿದೆ.
ಗ್ರಾಮ ನಕ್ಷೆಯಲ್ಲಿ ತೋರಿಸಲಾಗಿರುವ ಕಾಲುದಾರಿ ಬಂಡಿ ದಾರಿ ಅಥವಾ ಸಣ್ಣ ದಾರಿಗಳನ್ನು, ಅನ್ಯ ಕೃಷಿ ಬಳಕೆದಾರರು ಕೃಷಿಕರಿಗೆ ತಿರುಗಾಡಲು ಅವಕಾಶ ನೀಡದೆ ಅಂತಹ ದಾರಿಗಳನ್ನು ಮುಚ್ಚಿದ್ದರೆ, ದಾರಿಯನ್ನು ತೆರವುಗೊಳಿಸಿ ಅನಾದಿಕಾಲದಿಂದ ಇರುವ ದಾರಿಯನ್ನೇ ಇಲ್ಲವಾಗಿಸಿದ್ದರೆ, ತಕ್ಷಣ ತಹಶೀಲ್ದಾರರು ಈ ಬಗ್ಗೆ ಮುಂಜಾಗ್ರತೆ ವಹಿಸಿ ರೈತರಿಗೆ ದಾರಿ ಮಾಡಿಕೊಡಬೇಕು ಎಂದು ಸರ್ಕಾರ ತಿಳಿಸಿದೆ.
ರೈತರು ತಮ್ಮ ಜಮೀನಿಗೆ ತೆರಳಲು ಅಗತ್ಯ ಇರುವ ಕಾಲು ದಾರಿ ಅಥವಾ ಬಂಡಿದಾರಿಯನ್ನು ಮುಚ್ಚಿ ರೈತರಿಗೆ ತಮ್ಮ ಕೃಷಿ ಜಮೀನಿಗೆ ಹೋಗಲು ಅಡ್ಡ ಪಡಿಸುವ ಖಾಸಗಿ ಜಮೀನುದಾರರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಗ್ರಾಮ ನಕಾಶೆಯಲ್ಲಿ ಇರುವಂತೆ ಖಾಸಗಿ ಜಮೀನಾಗಿದ್ದರು ಕೂಡ ರೈತರಿಗೆ ತಮ್ಮ ಜಮೀನಿಗೆ ತೆರಳಲು ರಸ್ತೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ಹೊರಡಿಸಿದೆ.
ಹಾಗಾಗಿ ಇನ್ನು ಮುಂದೆ ಯಾವುದೇ ರೈತರು ಕೂಡ ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಪರಿತಪಿಸುವ ಅಗತ್ಯ ಇಲ್ಲ. ಜೊತೆಗೆ ತಮ್ಮ ಜಮೀನಿಗೆ ಅಗತ್ಯ ಇರುವ ಸಲಕರಣೆಗಳನ್ನು ಕೊಂಡು ಹೋಗಲು ಹಾಗೂ ಜಮೀನಿನಿಂದ ಫಸಲನ್ನು ಸಾಗಿಸಲು ಈ ರಸ್ತೆಗಳು ಅನುಕೂಲ ಮಾಡಿಕೊಡಲಿವೆ. ಇಷ್ಟಾಗಿಯೂ ಯಾರಾದ್ರೂ ರಸ್ತೆ ಮಾಡಿಕೊಡಲು ನಿರಾಕರಿಸಿದರೆ ಅಂತವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.