ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ ಆತಂಕಕಾರಿ ವಿಚಾರವಾಗಿದೆ. ಏಕೆಂದರೆ ಇದು ವಿವಿಧ ರೋಗಗಳಿಗೆ ಮುಖ್ಯ ಕಾರಣವಾಗಿದೆ. ವಾಸ್ತವವಾಗಿ, ಬೊಜ್ಜು ಹೃದಯ ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವೂ ಕೂಡ ಹೆಚ್ಚು. ಪ್ರಪಂಚದಾದ್ಯಂತ ಸುಮಾರು 2 ಬಿಲಿಯನ್ ಜನರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ.
ಪ್ರಪಂಚದಾದ್ಯಂತ ಸಾಕಷ್ಟು ಮಂದಿಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಬೊಜ್ಜು. ದೇಹದ ತೂಕ ಒಮ್ಮೆ ಹೆಚ್ಚಾದರೆ ಇಳಿಸಿಕೊಳ್ಳುವುದು ಬಹಳ ಕಷ್ಟ. ವಿಶೇಷವಾಗಿ ಹೊಟ್ಟೆಯ ಬೊಜ್ಜು ಹೆಚ್ಚಾದರೆ, ಇದನ್ನು ಕರಗಿಸಿಕೊಳ್ಳಲು, ಜನರು ಜಿಮ್, ಯೋಗ, ವ್ಯಾಯಾಮ, ಏರೋಬಿಕ್ಸ್, ವಾಕಿಂಗ್ ಹೀಗೆ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ.
ಕಳಪೆ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯೇ ಬೊಜ್ಜಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮತೋಲನ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಜನರು ತೊಡಗಿಸಿಕೊಳ್ಳುವುದು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ, ವಯಸ್ಕರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ.
ಬೊಜ್ಜಿನಿಂದ ಮಧುಮೇಹ, ಮೂತ್ರಪಿಂಡ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಬರಬಹುದು. ಹೀಗಾಗಿ ವೈದ್ಯರು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡುತ್ತಾರೆ. ಸದ್ಯ ತೂಕ ಇಳಿಸಿಕೊಳ್ಳಲು ಸಹಾಯಕವಾಗಿರುವ ಸರಳ, ನೈಸರ್ಗಿಕ ಮಾರ್ಗಗಳು ಯಾವುವು ಎಂಬುವುದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ತೂಕ ಇಳಿಸಿಕೊಳ್ಳಲು ನೀವು ಕಷ್ಟಪಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಅನ್ನ ಅಥವಾ ಅಕ್ಕಿ ಗಂಜಿ ಕುಡಿಯುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಬೊಜ್ಜನ್ನು ಕರಗಿಸಿಕೊಳ್ಳಲು ಅನ್ನದ ಗಂಜಿಯನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಎಂಬ ಬಗ್ಗೆ ವಿವರಣೆ ಇಲ್ಲಿದೆ ನೋಡಿ.
ಅಕ್ಕಿ ಗಂಜಿ ಪೌಷ್ಟಿಕ ಪಾನೀಯ: ಅಕ್ಕಿ ನೀರನ್ನು ಪೌಷ್ಟಿಕ ಪಾನೀಯವೆಂದು ಪರಿಗಣಿಸಲಾಗುತ್ತದೆ. ಈ ನೀರನ್ನು ಹೆಚ್ಚಾಗಿ ಅತಿಸಾರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವವರಿಗೆ ನೀಡಲಾಗುತ್ತದೆ. ಇದರಲ್ಲಿರುವ ಪಿಷ್ಟವು ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಫಿಟ್ ಆಗಿರಿಸುತ್ತದೆ. ಇದು ತೂಕ ಇಳಿಕೆಗೂ ಸಹಾಯಕವಾಗಿದ್ದು, ಇದರ ಸೇವನೆಯು ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.
ಅಕ್ಕಿ ಗಂಜಿ ಪ್ರಯೋಜನಗಳು: ಬೇಯಿಸಿದ ಅನ್ನವನ್ನು ಸೋಸಿ ಪೇಸ್ಟ್ ಮಾಡಿ, ಆ ನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಇದು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದಲ್ಲದೇ, ನಾವು ಸೇವಿಸುವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆ ದೂರಾಗುತ್ತದೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.
ರಕ್ತದೊತ್ತಡ ನಿಯಂತ್ರಣ: ಅನ್ನ ಬೇಯಿಸಿದ ಗಂಜಿಯನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯಲು ಸಹಾಯವಾಗುತ್ತದೆ. ಇದರಿಂದಾಗಿ, ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಆಯಾಸ ಮತ್ತು ಒತ್ತಡದಿಂದ ಪರಿಹಾರ ನೀಡುತ್ತದೆ. ಇದನ್ನು ಕುಡಿಯುವುದರಿಂದ ದೇಹವು ಉತ್ಸಾಹದಿಂದ ಕೂಡಿರುತ್ತದೆ.
ಅಕ್ಕಿ ಗಂಜಿ ಹೇಗೆ ಕುಡಿಯಬೇಕು?: ಮೊದಲು ಅಕ್ಕಿಯನ್ನು ಕುದಿಸುವಾಗಲೇ ಹೆಚ್ಚುವರಿ ನೀರನ್ನು ತೆಗೆದು ಹಾಕಿ. ಈ ನೀರನ್ನು ಅನ್ನದ ಗಂಜಿ ಎಂದು ಕರೆಯಲಾಗುತ್ತದೆ. ಈ ನೀರನ್ನು ಶೋಧಿಸಿ ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಟ್ಟು, ನಂತರ ಈ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಸೂಪ್ ನಂತೆ ಕುಡಿಯಿರಿ. ಸುಮಾರು 3 ವಾರಗಳ ಕಾಲ ಹೀಗೆ ಈ ಪಾನೀಯವನ್ನು ಕುಡಿಯುವುದರಿಂದ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದಾಗಿದೆ.