ಬೆಂಗಳೂರು: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆ ಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಅಗತ್ಯವಾದ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಯೋಜನೆಯು ಸೌರ ಫಲಕಗಳನ್ನು ಅಳವಡಿಸಲು ಖರ್ಚಾಗುವ ವೆಚ್ಚದ 40% ವರೆಗೆ ಸಬ್ಸಿಡಿಯನ್ನು ಒಳಗೊಂಡಿರುತ್ತದೆ.
ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಈ ಸರ್ಕಾರಿ ಯೋಜನೆ ಹೊಂದಿದ್ದು, ಫೆಬ್ರವರಿ 15, 2024 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. 75,000 ಕೋಟಿಗೂ ಹೆಚ್ಚು ಹೂಡಿಕೆಯ ಈ ಉಪಕ್ರಮವು ಪ್ರತಿ ತಿಂಗಳು 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
2-ಕಿಲೋವ್ಯಾಟ್ ಸಿಸ್ಟಂಗಳನ್ನು ಸ್ಥಾಪಿಸುವವರಿಗೆ, ಹೊಸ ಸಬ್ಸಿಡಿ 60,000 ರೂ. ಆಗಿರುತ್ತದೆ. 3 ಕಿಲೋವ್ಯಾಟ್ ರೂಫ್ಟಾಪ್ ಸೋಲಾರ್ ಸಿಸ್ಟಮ್ ಅಳವಡಿಸುವ ಕುಟುಂಬಗಳಿಗೆ ಹಳೆಯ ಯೋಜನೆಯಡಿ 54,000ರೂ .ಬದಲಿಗೆ 78,000ರೂ. ಸಬ್ಸಿಡಿ ಸಿಗುತ್ತದೆ. ನವೆಂಬರ್ 2023 ರ ಹೊತ್ತಿಗೆ, ಯೋಜನೆಯ ಹಂತ-II ಅಡಿಯಲ್ಲಿ ಸ್ಥಾಪಿಸಲಾದ ಸಾಮರ್ಥ್ಯವು 2,651.10 MW ಆಗಿತ್ತು.
ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಮ
- ಪಿಎಂ ಸೂರ್ಯ ಘರ್ ಯೋಜನೆಗೆಂದು ಪೋರ್ಟಲ್ ಸಿದ್ಧಪಡಿಸಲಾಗಿದೆ. ಅಲ್ಲಿ ನೊಂದಾಯಿಸಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ: pmsuryaghar.gov.in
- ಇಲ್ಲಿ ನಿಮ್ಮ ರಾಜ್ಯ, ಡಿಸ್ಕಾಂ ಕಂಪನಿ ಆಯ್ಕೆ ಮಾಡಿ
- ಎಲೆಟ್ರಿಕ್ ಬಿಲ್ನ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ನಮೂದಿಸಿ ನೊಂದಾಯಿಸಿಕೊಳ್ಳಿ.
- ಈಗ ಕನ್ಸೂಮರ್ ನಂಬರ್ ಮತ್ತು ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿರಿ.
- ಲಾಗಿನ್ ಆದ ಬಳಿಕ ರೂಫ್ಟಾಪ್ ಸೋಲಾರ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಇದಕ್ಕೆ ಅನುಮೋದನೆ ಸಿಗುವವರೆಗೂ ಕಾಯಬೇಕು. ಅನುಮೋದನೆ ದೊರೆತ ಬಳಿಕ ನೊಂದಾಯಿತ ಮಾರಾಟಗಾರರು ನಿಮ್ಮ ಮನೆಗೆ ಬಂದು ಸೌರ ಘಟಕವನ್ನು ಸ್ಥಾಪಿಸುತ್ತಾರೆ.
ಇದಾದ ಬಳಿಕ ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಬೇಕು. ನೆಟ್ ಮೀಟರ್ ಇನ್ಸ್ಟಾಲ್ ಆಗಿ ಡಿಸ್ಕಾಂ ಅಧಿಕಾರಿಗಳಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಸಿಗುತ್ತದೆ.
ಬಳಿಕ ಪಿಎಂ ಸೂರ್ಯಘರ್ ಪೋರ್ಟಲ್ಗೆ ಹೋಗಿ ಮತ್ತೆ ಲಾಗಿನ್ ಆಗಿ, ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಕ್ಯಾನ್ಸಲ್ ಮಾಡಿದ ಚೆಕ್ನ ಸ್ಕ್ಯಾನ್ಡ್ ಕಾಪಿಯನ್ನು ಅಪ್ಲೋಡ್ ಮಾಡಿ. ಇದು ಕೊನೆಯ ಪ್ರಕ್ರಿಯೆ. ಇದು ಮುಗಿದ ಬಳಿಕ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಂದು ಸೇರುತ್ತದೆ.