ಭಾರತದ ಎಲ್ಲ ಹಿಂದೂಗಳ ಮನೆಯಲ್ಲಿ ದೇವರ ಕೋಣೆಯೊಂದು ಇರ್ಲೇಬೇಕು. ದೇವರಿಗೆ ಪ್ರತ್ಯೇಕ ರೂಮಿಲ್ಲವೆಂದ್ರೂ ದೇವರ ಮೂರ್ತಿ ಮಾತ್ರ ಇದ್ದೇ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆಯಲ್ಲಿ ಎಲ್ಲರು ಭಕ್ತಿಯಿಂದ ಮಾಡ್ತಾರೆ. ತಮ್ಮಿಷ್ಟದ ದೇವರನ್ನು ಪೀಠದಲ್ಲಿಟ್ಟು ಪೂಜೆ ಮಾಡ್ತಾರೆ. ಇನ್ನೂ ಶನಿ ದೇವನನ್ನು ಅತ್ಯಂತ ಕ್ರೂರ ದೇವತೆ ಎಂದು ಪರಿಗಣಿಸಲಾಗುತ್ತದೆ.
ನ್ಯಾಯ ದೇವರು ಎಂದೂ ಶನಿಯನ್ನು ಕರೆಯಲಾಗುತ್ತದೆ. ಶನಿದೇವರು ಸೂರ್ಯದೇವ ಮತ್ತು ಅವರ ಪತ್ನಿ ಛಾಯಾರ ಮಗ. ನಾವು ಮಾಡಿದ ಕೆಲಸಕ್ಕೆ ಅನುಗುಣವಾಗಿ ಶನಿದೇವರು ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಅಂದ್ರೆ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲ ಸಿಗುತ್ತದೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತದೆ.
ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆಯಿರುತ್ತದೆ. ದೇವರ ಮನೆಯಲ್ಲಿ ಲಕ್ಷ್ಮಿ, ಗಣಪತಿ, ಈಶ್ವರ, ಕೃಷ್ಣ, ಹನುಮಂತ ಹೀಗೆ ಅನೇಕ ದೇವರ ಮೂರ್ತಿ ಅಥವಾ ಫೋಟೋಗಳನ್ನಿಟ್ಟು ಜನರು ಪೂಜೆ ಮಾಡ್ತಾರೆ. ಆದರೆ ಶನಿದೇವನ ವಿಗ್ರಹ ಅಥವಾ ಫೋಟೋವನ್ನು ಇತರ ದೇವರುಗಳಂತೆ ಮನೆಯಲ್ಲಿ ಇಡುವುದಿಲ್ಲ. ಮನೆಯಲ್ಲಿ ಶನಿದೇವರ ಫೋಟೋಕ್ಕೆ ಪೂಜೆ ನಡೆಯುವುದಿಲ್ಲ. ಮನೆಯಲ್ಲಿ ಏಕೆ ಶನಿದೇವರ ಮೂರ್ತಿ ಅಥವಾ ಫೋಟೋ ಇಡುವುದಿಲ್ಲ ಎಂದು ಯೋಚಿಸಿದ್ದೀರಾ? ಇಂದು ಏಕೆ ಶನಿದೇವರ ಮೂರ್ತಿಯನ್ನು ಮನೆಯಲ್ಲಿ ಇಡುವುದಿಲ್ಲ ಎಂಬುದನ್ನು ಹೇಳ್ತೇವೆ.
ಶನಿದೇವರ ಮೂರ್ತಿಯನ್ನು ಮನೆಯಲ್ಲಿದಿರಲು ಕಾರಣ : ಧರ್ಮಗ್ರಂಥಗಳಲ್ಲಿ, ಮನೆಯಲ್ಲಿ ಕೆಲವು ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳನ್ನು ಇಡುವುದನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಶನಿದೇವನ ಮೂರ್ತಿಯೂ ಒಂದು. ಶನಿದೇವ ಶಾಪಗ್ರಸ್ತನಾಗಿದ್ದಾನೆ. ಪೌರಾಣಿಕ ನಂಬಿಕೆಯ ಪ್ರಕಾರ, ಶನಿದೇವನು ಯಾರ ಮೇಲೆ ದೃಷ್ಟಿ ಹಾಯಿಸಿದರೂ ಅದು ಅಶುಭವಾಗುತ್ತದೆ ಎಂಬ ಶಾಪವಿದೆ. ಹಾಗಾಗಿ ಶನಿಯ ವಿಗ್ರಹವನ್ನು ಅಥವಾ ಫೋಟೋವನ್ನು ಮನೆಯಲ್ಲಿ ಇಡುವುದಿಲ್ಲ. ಶನಿದೇವರ ದೃಷ್ಟಿಯಿಂದ ದೂರ ಉಳಿಯಬೇಕು ಎಂಬ ಕಾರಣಕ್ಕಾಗಿಯೇ ಜನರು ಶನಿ ದೇವರನ್ನು ದೇವಸ್ಥಾನದಲ್ಲಿ ಮಾತ್ರ ಪೂಜೆ ಮಾಡ್ತಾರೆ.
ಹೌದು ಬ್ರಹ್ಮಪುರಾಣದ ಪ್ರಕಾರ, ಶನಿದೇವನ ವಿಗ್ರಹ ಪೂಜೆ ಮಾಡದಿರಲಿ ಆತನ ಹೆಂಡತಿ ಕಾರಣ ಎನ್ನಲಾಗುತ್ತದೆ. ಒಮ್ಮೆ ಶನಿ ಧ್ಯಾನ ಮಾಡುತ್ತಿರುತ್ತಾನೆ. ಆಗ ಅದನ್ನ ಭಂಗ ಮಾಡಲು ಆತನ ಹೆಂಡತಿ ಪ್ರಯತ್ನ ಮಾಡುತ್ತಾನೆ. ಆದರೆ ಆತ ಧ್ಯಾನದಿಂದ ಹೊರಗೆ ಬರುವುದಿಲ್ಲ. ಇದರಿಂದ ಕೋಪಗೊಂಡ ಶನಿಯ ಹೆಂಡತಿ ಆತನಿಗೆ ಶಾಪ ನೀಡುತ್ತಾಳೆ. ಯಾವುದರ ಮೇಲೆ ಅಥವಾ ಯಾರ ಮೇಲೆಯೂ ಶನಿ ಕಣ್ಣು ಹಾಕಿದರೂ ಅವರ ಜೀವನ ಕಷ್ಟಗಳಿಂದ ತುಂಬಿರುತ್ತದೆ. ಈ ಕಾರಣದಿಂದ ಶನಿದೇವನ ವಿಗ್ರಹ ಅಥವಾ ಚಿತ್ರವನ್ನು ಮನೆಯಲ್ಲಿ ಇಡದಿರುವುದರಿಂದ ಆತನ ದೃಷ್ಟಿಯಿಂದ ಪಾರಾಗಬಹುದು ಎನ್ನಲಾಗುತ್ತದೆ.
ಶನಿ ದೇವರ ಪೂಜೆ ವಿಧಾನ : ಇಷ್ಟೇ ಅಲ್ಲ, ಶನಿದೇವರ ಪೂಜೆ ಮಾಡುವಾಗಲೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡ್ತೇವೆ. ದೇವರ ಕಣ್ಣುಗಳನ್ನು ನೋಡ್ತಾ, ಆಸೆ ಈಡೇರಿಸುವಂತೆ ಬೇಡಿಕೊಳ್ತೇವೆ. ಆದ್ರೆ ಶನಿ ದೇವರನ್ನು ಎಂದಿಗೂ ನೇರವಾಗಿ ನೋಡಬಾರದು. ಶನಿಯನ್ನು ಪೂಜಿಸುವಾಗಲೂ ಕೂಡ ಮೂರ್ತಿಯ ಮುಂದೆ ನೇರವಾಗಿ ನಿಂತು ಶನಿಯನ್ನು ನೋಡಬಾರದು. ಬದಲಿಗೆ, ವಿಗ್ರಹದ ಬಲ(right) ಅಥವಾ ಎಡ(left)ಭಾಗದಲ್ಲಿ ನಿಂತು ಶನಿದೇವನ ದರ್ಶನವನ್ನು ಯಾವಾಗಲೂ ಪಡೆಯಬೇಕು.