ನಾಯಿ ಮನುಷ್ಯನಿಗೆ ಕಚ್ಚುವುದಿರಲಿ, ಮನುಷ್ಯನೇ ನಾಯಿಗೆ ಕಚ್ಚುವ ಕಾಲ ಬಂದು ಬಿಟ್ಟಿದೆ!! ಇರಲಿ ಬಿಡಿ. ಅದು ಕಚ್ಚುವ ಮನುಷ್ಯನಿಗೆ ಮತ್ತು ಕಚ್ಚಿಸಿಕೊಳ್ಳುವ ನಾಯಿಗೆ ಬಿಟ್ಟ ವಿಷಯ. ಈಗ ಅಸಲಿ ವಿಚಾರ ಎಂದರೆ, ರಸ್ತೆಯಲ್ಲಿ ನೀವು ಹೀಗೆ ವಾಕಿಂಗ್ ಹೋಗುತ್ತಿದ್ದಾಗ, ಅಥವಾ ನಿಮ್ಮ ಪಾಡಿಗೆ ನೀವು ನಡೆದು ಕೊಂಡು ಹೋದ ಸಂದರ್ಭದಲ್ಲಿ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದು ನಿಮ್ಮನ್ನು ಕಚ್ಚಿದಾಗ, ಮನೆಯಲ್ಲಿ ನೀವೇ ಮುದ್ದಾಗಿ ಸಾಕಿದ ನಾಯಿ ಸರಿಯಾದ ಸಮಯಕ್ಕೆ ಊಟ ಹಾಕಲಿಲ್ಲ ಎನ್ನುವ ಸಿಟ್ಟಿಗೆ ನಿಮ್ಮ ಕಾಲಿಗೆ ಬಾಯಿ ಹಾಕಿದಾಗ ತಕ್ಷಣ ಏನು ಮಾಡಬೇಕು ಎನ್ನುವುದು ಸಾಮಾನ್ಯವಾಗಿ ತೋಚುವುದಿಲ್ಲ.
ವಿದೇಶಕ್ಕೆ ಹೋಲಿಸಿದ್ರೆ ನಮ್ಮ ದೇಶದ ತುಳಸಿ ಬೀಜಗಳೇ ಬೆಸ್ಟ್! ಯಾಕೆ ಗೊತ್ತಾ!?
ನಾಯಿಗಳೆಂದರೆ ಕೆಲವರಿಗೆ ಮನೆ ಮಗ; ಆದರೆ ಇನ್ನು ಕೆಲವರಿಗೆ ಆದನ್ನು ಕಂಡ್ರೆ ತುಂಬಾ ಹೆದರಿಕೆ. ಅದರಲ್ಲೂ ನಾಯಿ ಏನಾದರೂ ಕಚ್ಚಿದರೆ ಎಂಬ ಭಯವೇ ಹೆಚ್ಚು. ಹಾಗಾದರೆ, ನಾಯಿ ಕಚ್ಚಿದರೆ ತಕ್ಷಣವೇ ಯಾವ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂಬಲ್ಲಾದರ ಕುರಿತು ಮಾಹಿತಿ ಇಲ್ಲಿದೆ..
ನಾಯಿ ಕಚ್ಚಿದಾಗ ಜನರು ಹೆಚ್ಚಾಗಿ ಭಯಪಡುತ್ತಾರೆ, ಆದರೆ ಭಯ ಬೀಳಬಾರದು. ಜೊತೆಗೆ ಸೋಂಕಿನಿಂದ ತಪ್ಪಿಸಿಕೊಳ್ಳಲು ತಕ್ಷಣಕ್ಕೆ ಈ ಕೆಲವು ಕೆಲಸಗಳನ್ನು ಮಾಡಬೇಕು. ಹಾಗಾದರೆ ನಾಯಿ ಕಚ್ಚಿದ ತಕ್ಷಣ ನಾವು ಮಾಡಬೇಕಾದ ಕೆಲಸವೇನು, ಯಾವುದನ್ನು ಮಾಡಬಾರದು, ಸೋಂಕಿನ ಅಪಾಯ ಕಡಿಮೆ ಮಾಡಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.
ಇನ್ನು ನಾಯಿ ಏನಾದರೂ ಕಚ್ಚಿದರೆ ಮಾನವನಿಗೆ ರೇಬೀಸ್ ಎಂಬ, ನಾಯಿಯ ಲಾಲಾರಸದಲ್ಲಿ ಉತ್ಪತ್ತಿಯಾಗುವ ತುಂಬಾ ಅಪಾಯಕಾರಿ ವೈರಸ್ ತಗಲುವ ಸಾಧ್ಯೆತೆ ಇರುತ್ತದೆ. ಇನ್ನು ರೇಬೀಸ್ ಸೋಂಕಿತ ನಾಯಿಯ ಕಡಿತವು ತೀವ್ರ ಅಪಾಯಕಾರಿ ಎಂಬುದರಿಂದ, ನಾಯಿ ಕಚ್ಚಿದ ತಕ್ಷಣ ಎಲ್ಲರೂ ARV (ಆಂಟಿ-ರೇಬೀಸ್ ಲಸಿಕೆ) ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ. ರೇಬೀಸ್ ಒಂದು ದುರದೃಷ್ಟಕರ ವೈರಲ್ ಕಾಯಿಲೆಯಾಗಿದ್ದು, ಸೋಂಕಿತ ನಾಯಿಯ ಕಡಿತದಿಂದ ಮನುಷ್ಯರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ
ರೋಗವು ಕೇವಲ ನಾಯಿಯ ಕಡಿತದಿಂದ ಮಾತ್ರವಲ್ಲ, ನಾಯಿ ನೆಕ್ಕಿದಾಗ ದೇಹದ ಮೇಲಿನ ಸಣ್ಣ ಗಾಯಗಳಿಗೆ ಲಾಲಾರಸ ಸೇರಿದರೂ ರೇಬೀಸ್ ಹರಡುತ್ತದೆ. ಆದ್ದರಿಂದ, ನಾಯಿ ಕಚ್ಚಿದ ತಕ್ಷಣ, ಗಾಯವನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ಕನಿಷ್ಠ 10-15 ನಿಮಿಷಗಳ ಕಾಲ ಚೆನ್ನಾಗಿ ತೊಳೆಯಿರಿ. ಇದು ಗಾಯದಲ್ಲಿ ಇರಬಹುದಾದ ಬ್ಯಾಕ್ಟೀರಿಯಾ ಅಥವಾ ರೇಬಿಸ್ ವೈರಸ್ನಂತಹ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸಾಧ್ಯವಾದರೆ, ಓಡುವ ನೀರಿನಡಿ ಗಾಯವನ್ನು ತೊಳೆಯಿರಿ
ರಕ್ತಸ್ರಾವವನ್ನು ನಿಯಂತ್ರಿಸಿ: ಗಾಯದಿಂದ ರಕ್ತಸ್ರಾವ ಆಗುತ್ತಿದ್ದರೆ, ಶುದ್ಧ ಬಟ್ಟೆ ಅಥವಾ ಬ್ಯಾಂಡೇಜ್ ಬಳಸಿ ಒತ್ತಡ ಹಾಕಿ ರಕ್ತವನ್ನು ನಿಲ್ಲಿಸಿ. ಆದರೆ, ಗಾಯವನ್ನು ತೊಳೆಯದೆ ಒತ್ತಡ ಹಾಕಬೇಡಿ—ಮೊದಲು ತೊಳೆಯುವುದು ಮುಖ್ಯ.
ಗಾಯಕ್ಕೆ ಆಂಟಿಸೆಪ್ಟಿಕ್ ಹಚ್ಚಿ: ತೊಳೆದ ನಂತರ, ಗಾಯದ ಮೇಲೆ ಬೆಟಾಡಿನ್ ಅಥವಾ ಆಲ್ಕೊಹಾಲ್ ಆಧಾರಿತ ಆಂಟಿಸೆಪ್ಟಿಕ್ ಹಚ್ಚಿ ಸೋಂಕು ತಡೆಗಟ್ಟಿ. ಆದರೆ, ಇದನ್ನು ತುಂಬಾ ಆಳವಾದ ಗಾಯಕ್ಕೆ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ತಕ್ಷಣ ವೈದ್ಯರ ಬಳಿಗೆ ತೆರಳಿ: ಗಾಯವನ್ನು ಸ್ವಚ್ಛಗೊಳಿಸಿದ ನಂತರ, ಆದಷ್ಟು ಬೇಗ ಆಸ್ಪತ್ರೆಗೆ ಹೋಗಿ. ನಾಯಿ ಕಚ್ಚುವಿಕೆಯಿಂದ ರೇಬಿಸ್ ಸಾಧ್ಯತೆ ಇರುತ್ತದೆ, ಇದು ಪ್ರಾಣಾಂತಕವಾಗಬಹುದು. ವೈದ್ಯರು ರೇಬಿಸ್ ಲಸಿಕೆ ಮತ್ತು ಅಗತ್ಯವಿದ್ದರೆ ರೇಬಿಸ್ ಇಮ್ಯುನೊಗ್ಲೊಬ್ಯುಲಿನ್ ನೀಡಬಹುದು.
ನಾಯಿಯ ಮಾಹಿತಿ ಸಂಗ್ರಹಿಸಿ: ಸಾಧ್ಯವಾದರೆ, ಆ ನಾಯಿ ಯಾರಿಗೆ ಸೇರಿದೆ, ಅದಕ್ಕೆ ರೇಬಿಸ್ ಲಸಿಕೆ ಹಾಕಲಾಗಿದೆಯೇ ಎಂಬ ಮಾಹಿತಿಯನ್ನು ಪಡೆಯಿರಿ. ಇದು ವೈದ್ಯರಿಗೆ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಬೀದಿ ನಾಯಿಯಾಗಿದ್ದರೆ, ಅದನ್ನು ಸ್ಥಳೀಯ ಪ್ರಾಣಿ ನಿಯಂತ್ರಣ ಸಂಸ್ಥೆಗೆ ವರದಿ ಮಾಡಿ.
ಗಾಯವನ್ನು ಮೇಲ್ವಿಚಾರಣೆ ಮಾಡಿ: ಚಿಕಿತ್ಸೆ ಪಡೆದ ನಂತರವೂ, ಗಾಯದಲ್ಲಿ ಕೆಂಪು, ಊತ, ಜ್ವರ ಅಥವಾ ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಇದು ಸೋಂಕಿನ ಸೂಚನೆಯಾಗಿರಬಹುದು.
ಗಮನಿಸಬೇಕಾದ ಸಂಗತಿಗಳು: ರೇಬಿಸ್ ಲಸಿಕೆಯ ಮೊದಲ ಡೋಸ್ ತಕ್ಷಣವೇ ಪಡೆಯುವುದು ಮುಖ್ಯ, ಮತ್ತು ವೈದ್ಯರ ಸೂಚನೆಯಂತೆ ನಂತರದ ಡೋಸ್ಗಳನ್ನು ಪಡೆಯಿರಿ.
ಆದರೆ, ಗಾಯ ಆಳವಾಗಿದ್ದರೆ ಅಥವಾ ಮುಖ, ಕೈ ಅಥವಾ ಕಾಲಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇದ್ದರೆ, ತುರ್ತು ಚಿಕಿತ್ಸೆ ಅಗತ್ಯ. ಜೊತೆಗೆ ಸಾಕುಪ್ರಾಣಿಯಾಗಿದ್ದರೂ, ಲಸಿಕೆ ಹಾಕದ ನಾಯಿಯ ಕಡಿತವೂ ಅಪಾಯಕಾರಿ ಎಂದು ಪರಿಗಣಿಸಿ. ಇನ್ನು ತಕ್ಷಣ ಕ್ರಮ ತೆಗೆದುಕೊಂಡರೆ, ಆರೋಗ್ಯದ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ.