ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23 ರಂದು ರೈತರ ದಿನವನ್ನು ಆಚರಿಸಲಾಗುತ್ತದೆ. ಭಾರತದ ರೈತರ ಕೊಡುಗೆ ಮತ್ತು ಶ್ರಮಕ್ಕೆ ನಮನವನ್ನು ಸಲ್ಲಿಸಲು ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು, ದೇಶದ ಪ್ರತಿ ರೈತನ ಅದ್ಭುತ ಕೊಡುಗೆಯನ್ನು ನೆನಪಿಸಿಕೊಳ್ಳಲು ಮತ್ತು ಒಗ್ಗೂಡಲು ಈ ಸಮಯ ತುಂಬ ಅವಿಸ್ಮರಣೀಯವಾದದ್ದು.
ಮಾಜಿ ಪ್ರಧಾನಿ ಜನ್ಮದಿನದಂದು ರೈತ ದಿನಾಚರಣೆ ಆಚರಣೆ!
ನಿಮಗೆ ಗೊತ್ತಾ ಭಾರತದ ಮಾಜಿ ಪ್ರಧಾನಿಯೊಬ್ಬರ ಜನ್ಮ ದಿನದಂದು ರೈತ ದಿನಾಚರಣೆ ಆಚರಿಸುತ್ತಾರೆಂದು? ಹೌದು ಭಾರತದಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನದಂದು ರೈತ ದಿನಾಚರಣೆ ಆಚರಣೆ ಮಾಡಲಾಗುತ್ತದೆ.
ಚೌಧರಿ ಚರಣ್ ಸಿಂಗ್ ಅವರು ದೇಶಾದ್ಯಂತ ರೈತರ ಅನುಕೂಲ ಹಾಗೂ ಕಲ್ಯಾಣಕ್ಕಾಗಿ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇದರ ಸ್ಮರಣಾರ್ಥವಾಗಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ಭಾರತದಲ್ಲಿ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ.
ಅಷ್ಟೇ ಅಲ್ಲದೆ ಚೌಧರಿ ಚರಣ್ ಸಿಂಗ್ ಅವರು ರೈತರುಗಾಗಿ ಭೂಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಜೊತೆ ಜೊತೆಗೆ ರೈತರಿಗೆ ಮಾರಕವಾದ ಕೆಲವು ಕೃಷಿ ಕಾನೂನುಗಳಿಗೆ ಗುಡ್ಬೈ ಹೇಳಿದ್ದರು. ಆ ಮೂಲಕ ಅನ್ನದಾತರ ಪರವಾಗಿ ನಿಂತ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
2001 ರಿಂದ ಆರಂಭ!
ರಾಷ್ಟ್ರೀಯ ರೈತ ದಿನಾಚರಣೆಯನ್ನು 2001ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ರೈತರ ಪ್ರಧಾನಿ ಎಂದೇ ಗುರುತಿಸಿಕೊಂಡಿದ್ದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಿಸಲು ಅಂದಿನ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಅವರ ಜನ್ಮ ದಿನದಂದು ರೈತ ದಿನಾಚರಣೆಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ರೈತರ ದಿನಾಚರಣೆ ಮಹತ್ವ ಏನು?
ದೇಶದ ಆರ್ಥಿಕತೆ ಹಾಗೂ ಆಹಾರ ಭದ್ರತೆಗೆ ಅವಿಸ್ಮರಣಿಯ ಕೊಡುಗೆ ನೀಡುತ್ತಿರುವ ಸಮುದಾಯ ಅಂದರೇ ಅದು ರೈತಾಪಿ ವರ್ಗ. ಭಾರತ ಹಳ್ಳಿಗಳ ದೇಶವಾಗಿದ್ದು ಇಲ್ಲಿ ಕೃಷಿಯೇ ಪ್ರಧಾನ ಕಸುಬಾಗಿದೆ. ದೇಶದ ಅಂಸಂಖ್ಯಾತ ರೈತರು ಇಂದು ಹೊಲಗಳಲ್ಲಿ ಶ್ರಮಿಸುತ್ತಿರುವ ಫಲವೇ ಇಂದು ಆಹಾರ ಭದ್ರತೆ ಸುಸ್ಥಿಯಲ್ಲಿ ಸಾಗಿದೆ. ಅದರ ಜೊತೆಗೆ ಕೃಷಿ ಉತ್ಪಾದನೆಯಲ್ಲೂ ಕೂಡ ರೈತಾಪಿ ಸುಮುದಾಯದ ಕೊಡುಗೆ ಮಹತ್ತರವಾದದ್ದು ದೇಶಕ್ಕೆ ಆರ್ಥಿಕ ರಕ್ಷಣೆಯಾಗಿ ನಿಂತಿದೆ.
ದೇಶದ ಅರ್ಥ ವ್ಯವಸ್ಥೆಗೆ ಹಾಗೂ ಆಹಾರ ಭದ್ರತೆಗೆ ರೈತರ ಕೊಡುಗೆಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ರೈತ ದೇಶದ ಬೆನ್ನೆಲುಬು ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಹೇಳಿ. ಜಗತ್ತಿಗೆ ಅನ್ನ ನೀಡುವ ಅಸಂಖ್ಯಾತ ಕೈಗಳಿಗೆ ನಾವು ನೀವು ಎಲ್ಲರೂ ಕೂಡ ತಲೆಬಾಗಿ ನಮಿಸುವ ಸಮಯವಿದು ನಮ್ಮೆಲ್ಲರಿಗಾಗಿ ಹಗಳಿರುಲೆನ್ನದೆ ದುಡಿಯುವ ಕೈಗಳಿಗೆ ನಮ್ಮ ಕೋಟಿ ಕೋಟಿ ವಂದನೆಗಳು.