ಸಾಮಾನ್ಯವಾಗಿ ನೇರಳೆ ಹಣ್ಣು ಮಳೆಗಾಲದ ಆರಂಭದಲ್ಲಿ ದೊರೆಯುತ್ತವೆ. ಇದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತದೆ. ನೇರಳೆ ಹಣ್ಣಿಗೆ ಕೆಲವೊಂದು ರೋಗಗಳನ್ನು ನಿಯಂತ್ರಿಸುವ ಶಕ್ತಿ ಇದೆ.
ಮಧುಮೇಹಿಗಳಿಗೆ ಉಪಯುಕ್ತ
ನೇರಳೆ ಹಣ್ಣಿನ ಜೊತೆಗೆ, ಅದರ ಬೀಜಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹಿಗಳು ನೇರಳೆ ಬೀಜಗಳನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ.
ರಕ್ತವನ್ನು ಶುದ್ಧೀಕರಿಸುತ್ತದೆ
ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣದ ಜೊತೆಗೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ನೇರಳೆ ಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಕೂಡಾ ಸಹಾಯಕಾರಿಯಾಗಿದೆ. ನೇರಳೆ ಹಣ್ಣಿನೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.
ತೂಕವನ್ನು ನಿಯಂತ್ರಣದಲ್ಲಿಡುತ್ತದೆ
ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ನೇರಳೆ ಹಣ್ಣು ಬಹಳ ಉಪಯುಕ್ತವಾಗಿದೆ. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣು. ಆದ್ದರಿಂದ ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಹೆಚ್ಚಾಗಿ ನೇರಳೆ ಹಣ್ಣು ಉಪಯೋಗಿಸಿ.
ಕ್ಯಾನ್ಸರ್ ತಡೆಗಟ್ಟುತ್ತದೆ
ನೇರಳೆ ಹಣ್ಣು, ಕ್ಯಾನ್ಸರ್ನಂತಹ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನೇರಳೆ ಹಣ್ಣು, ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇವುಗಳಲ್ಲಿರುವ ಅಂಶಗಳು ದೇಹದಿಂದ ಫ್ರೀ ರಾಡಿಕಲ್ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೂತ್ರ ಹಾಗೂ ಬೆವರಿನ ಮೂಲಕ ದೇಹದಲ್ಲಿನ ಕಲ್ಮಷಗಳನ್ನು ಹೊರದೂಡುವಲ್ಲಿ ಸಹಾಯ ಮಾಡುತ್ತದೆ.
ಹೃದಯ ಸಂಬಂಧಿ ಕಾಯಿಲೆಗೆ ಪರಿಹಾರ
ನೇರಳೆ ಹಣ್ಣು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರ ಇರುತ್ತದೆ. ಕಿಡ್ನಿ ಕಲ್ಲುಗಳಿಂದ ಬಳಲುತ್ತಿರುವವರಿಗೆ ಕೂಡಾ ನೇರಳೆ ಹಣ್ಣು ಬಹಳ ಸಹಕಾರಿ. ಉರಿ ಮೂತ್ರ ಸಮಸ್ಯೆ ಇರುವವರಿಗೆ ಕೂಡಾ ನೇರಳೆ ಹಣ್ಣಿನ ರಸ ರಾಮಬಾಣ ಎನ್ನಲಾಗಿದೆ.