ಬೆಂಡೆಕಾಯಿ…ಹಲವರಿಗೆ ಇಷ್ಟ, ಕೆಲವರಿಗೆ ಕಷ್ಟ. ಹೀಗಾಗಿಯೇ ಪೋಷಕಾಂಶಗಳ ಆಗರವಾಗಿದ್ದರೂ ಬೆಂಡೆಕಾಯಿ ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಬೆಂಡೆಕಾಯಿಯು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಅನ್ನು ಹೊಂದಿರುತ್ತದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಪೊಟ್ಯಾಸಿಯಮ್, ವಿಟಮಿನ್ ಬಿ ಮತ್ತು ಸಿ, ಫೋಲಿಕ್ ಆಮ್ಲ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ.
ಇನ್ನೂ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು, ಸೊಪ್ಪು, ತರಕಾರಿಗಳು ಸೇರಿದಂತೆ ಫೈಬರ್ ಭರಿತ ಆಹಾರಗಳನ್ನು ಸೇವನೆ ಮಾಡಬೇಕು. ಅದರಲ್ಲೂ ಬೆಂಡೆಕಾಯಿ ಮಧುಮೇಹ ರೋಗಿಗಳಿಗೆ ಔಷಧಿ ಇದ್ದಂತೆ ಎಂದು ಹೇಳಲಾಗುತ್ತದೆ. ಬೆಂಡೆಕಾಯಿ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹೇಗೆ ಸಹಕಾರಿಯಾಗಿದೆ ಎಂಬುದನ್ನು ನೋಡೋಣ.
ಬೆಂಡೆಕಾಯಿ ಮಧುಮೇಹಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ?
ವಿಶೇಷವಾಗಿ ಬೆಂಡೆಕಾಯಿ ಕರಗಬಲ್ಲ ಮತ್ತು ಕರಗದ ನಾರಿನಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳತ್ತದೆ. ಈ ಪ್ರಕ್ರಿಯೆಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಮಧುಮೇಹ ರೋಗಿಗಳಿಗೆ ಬೆಂಡೆಕಾಯಿಯನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಂಡೆಕಾಯಿ ಕಡಿಮೆ ಕ್ಯಾಲೋರಿ , ಉತ್ತಮ ಪ್ರಮಾಣದ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಎಂದು ಹೇಳಲಾಗುತ್ತದೆ.
ಬೆಂಡೆಕಾಯಿಯಲ್ಲಿ ಗ್ಲೈಸೆಮಿಕ್ ಸೂಚ್ಯಾಂಕವೂ ಕಡಿಮೆಯಿದೆ. ಇದರಿಂದಾಗಿ ಈ ತರಕಾರಿಯನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಾಗುವುದಿಲ್ಲ. ಇದಲ್ಲದೆ ಬೆಂಡೆಕಾಯಿ ಪೊಟ್ಯಾಸಿಯಂ, ವಿಟಮಿ ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಫೋಲೇಟ್ನ ಅತ್ಯುತ್ತಮ ಮೂಲವಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ತುಂಬಾ ಸಹಕಾರಿಯಾಗಿದೆ.
ಮಧುಮೇಹಿಗಳು ಬೆಂಡೆಕಾಯಿಯನ್ನು ಏಕೆ ತಿನ್ನಬೇಕು?
ಫೈಬರ್ ಜೊತೆಗೆ ಬೆಂಡೆಕಾಯಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ 6 ಮತ್ತು ಪೋಲೇಟ್ ಅಂಶವನ್ನು ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹದಿಂದ ಉಂಟಾಗುವ ನರರೋಗದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಕಾಯಿಲೆ ಇರುವವರು ಬೆಂಡೆಕಾಯಿಯಿಂದ ವಿವಿಧ ಖಾದ್ಯಗಳನ್ನು ಮಾಡುವ ಮೂಲಕ, ಬೆಂಡೆಕಾಯಿ ನೀರನ್ನು ಸೇವನೆ ಮಾಡುವ ಮೂಲಕ ಹೀಗೆ ವಿವಿಧ ರೂಪದಲ್ಲಿ ಬೆಂಡೆಕಾಯಿಯನ್ನು ಸೇವಿಸಬಹುದು.