ರುಚಿಕರವಾದ ಗ್ರೇವಿ ಮಾಡುವ ಯೋಚನೆಯಲ್ಲಿ ಇದ್ದರೆ ಇಲ್ಲೊಂದು ಟೇಸ್ಟಿಯಾಗಿರುವ ರೆಸಿಪಿ ಇದೆ ಅದುವೇ “ಕಾಜು ಮಸಾಲ.
ಗೋಡಂಬಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ,ಈ ಕಾಜುಯಿಂದ ಮಾಡುವ ಯಾವುದೇ ಆಹಾರ ಪದಾರ್ಥವನ್ನು ತಯಾರಿಸಿದರೂ ಅದರ ರುಚಿಯೇ ಬೇರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಅಷ್ಟೇ ಅಲ್ಲ ಆರೋಗ್ಯಕ್ಕೂ ಇದು ಒಳ್ಳೆಯ ರೆಸಿಪಿ.
ಹಾಗಾದ್ರೆ ಇಂದು ನಾವು ನಿಮಗೆ ಕಾಜು ಮಸಾಲವನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು.
ಕಾಜು ಮಸಾಲ
ಬೇಕಾಗುವ ಸಾಮಗ್ರಿಗಳು
ಗೋಡಂಬಿ -1ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ-3,ಟೊಮೆಟೋ-2,ಎಣ್ಣೆ, ತುಪ್ಪ/ಬೆಣ್ಣೆ-3ಚಮಚ, ಗರಂ ಮಸಾಲ -1ಚಮಚ, ಕಸೂರಿ ಮೇಥಿ-1ಟೀಸ್ಪೂನ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ, ಚಕ್ಕೆ, ಲವಂಗ-ಎರಡೆರಡು, ಜೀರಿಗೆ-ಅರ್ಧ ಚಮಚ, ಧನಿಯಾ ಪುಡಿ (ಕೊತ್ತಂಬರಿ ಪುಡಿ)-1ಚಮಚ, ಅರಿಶಿನ ಪುಡಿ-ಅರ್ಧ ಟೀಸ್ಪೂನ್, ಮೆಣಸಿನ ಪುಡಿ-3ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
-ಮೊದಲಿಗೆ ಒಂದು ಬಾಣಲೆಗೆ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ ಅದಕ್ಕೆ ಗೋಡಂಬಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಪ್ಲೇಟ್ ಗೆ ಹಾಕಿ ಇಟ್ಟುಕೊಳ್ಳಿ.
-ನಂತರ ಅದೇ ಬಾಣಲೆಗೆ 3ಚಮಚ ಎಣ್ಣೆ ಹಾಕಿ ಚಕ್ಕೆ, ಲವಂಗ,ಜೀರಿಗೆ,ಸಣ್ಣಗೆ ಹೆಚ್ಚಿದ ಈರುಳ್ಳಿ,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
-ತದನಂತರ ಮಿಕ್ಸಿಜಾರಿಗೆ ಫ್ರೈ ಮಾಡಿಟ್ಟ ಮಸಾಲವನ್ನು ಹಾಕಿ ಅದಕ್ಕೆ 6ರಿಂದ 8ಹುರಿದ ಗೋಡಂಬಿಯನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ಈಗ ಒಂದು ಕಡಾಯಿಗೆ 2ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಮೆಣಸಿನ ಪುಡಿ,ಅರಿಶಿನ ಪುಡಿ ಮತ್ತು ಧನಿಯಾ ಪುಡಿ (ಕೊತ್ತಂಬರಿ ಪುಡಿ) ಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 3ರಿಂದ 5 ನಿಮಿಷಗಳವರೆಗೆ ಬೇಯಿಸಿರಿ.
-ಆಮೇಲೆ ಹುರಿದಿಟ್ಟ ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಗರಂ ಮಸಾಲ,ಕಸ್ತೂರಿ ಮೇಥಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ 5 ನಿಮಿಷಗಳ ಕಾಲ ಗ್ರೇವಿಯನ್ನು ಕುದಿಸಿದರೆ ಕಾಜು ಮಸಾಲ ಸವಿಯಲು ಸಿದ್ಧ.ಇದು ಚಪಾತಿ, ಪೂರಿ ಹಾಗೂ ರೋಟಿಗೆ ಹೇಳಿ ಮಾಡಿಸಿದ ಗ್ರೇವಿಯಾಗಿದೆ.