ಚಳಿಗಾಲದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಚಳಿಗಾಲದ ತಣ್ಣನೆಯ ಗಾಳಿಯು ಶ್ವಾಸನಾಳವನ್ನು ಕೆರಳಿಸುತ್ತದೆ. ಇದರಿಂದ ಕೆಲವು ಜನರಿಗೆ ಉಸಿರಾಡಲು ಸಹ ಕಷ್ಟವಾಗಿ, ನ್ಯುಮೋನಿಯಾ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಅನೇಕ ಜನರು ಅದರಲ್ಲೂ ವಿಶೇಷವಾಗಿ ವಯಸ್ಸಾದವರು ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುತ್ತಾರೆ. ಇದು ಉಸಿರಾಟದ ಸೋಂಕುಗಳನ್ನು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ.
ಶೀತ ಪರಿಸ್ಥಿತಿಗಳು ವೈರಸ್ಗಳು ಗಾಳಿಯಲ್ಲಿ ದೀರ್ಘಕಾಲ ಉಳಿಯಲು ಅನುವು ಮಾಡಿಕೊಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹೀಗಾಗಿ, ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶಗಳನ್ನು ರಕ್ಷಿಸಲು ಉತ್ತಮ ಮಾರ್ಗಗಳು ಯಾವುವು? ಎಂಬುದರ ಮಾಹಿತಿ ಇಲ್ಲಿದೆ.
ದಿನವೂ ನಿಯಮಿತವಾಗಿ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಕೈಗಳ ಮೂಲಕ ಮೂಗಿಗೆ ಮತ್ತು ಬಾಯಿಗೆ ಸೋಂಕು ಹರಡುವುದು ಕಡಿಮೆಯಾಗುತ್ತದೆ.
ಮಧುಮೇಹ, ಮತ್ತು ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಆರೋಗ್ಯ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಮತ್ತು ನ್ಯುಮೋನಿಯಾ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ.
ನ್ಯುಮೋನಿಯಾದಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಲು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಅದರಲ್ಲೂ ವಿಶೇಷವಾಗಿ ವಯಸ್ಸಾದವರು ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು.
ನೀವು ಶೀತ ಅಥವಾ ಚಳಿಯಲ್ಲಿ ಹೊರಗೆ ಹೋಗುವಾಗ ನಿಮ್ಮ ಮೂಗಿಗೆ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಇದರಿಂದ ವೈರಸ್ ಹರಡುವುದನ್ನು ಕೊಂಚ ಮಟ್ಟಿಗೆ ತಪ್ಪಿಸಬಹುದು. ತಂಪಾದ ಗಾಳಿಯು ಶುಷ್ಕವಾಗಿರುವುದರಿಂದ ನೀವು ಆಸ್ತಮಾ, COPD ಅಥವಾ ಬ್ರಾಂಕೈಟಿಸ್ ಹೊಂದಿದ್ದರೆ ಅದು ಶ್ವಾಸನಾಳಗಳನ್ನು ಕೆರಳಿಸಬಹುದು ಎಂದು ವೈದ್ಯರು ಹೇಳುತ್ತಾರೆ
ಚಳಿ ಹೆಚ್ಚಾದಂತೆ ಕೆಲವರು ಬೆಚ್ಚಗಾಗಲು ಕಟ್ಟಿಗೆ ಸುಟ್ಟು ಮೈಕಾಯಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸವಾಗಿದೆ. ಶೀತವನ್ನು ನಿವಾರಿಸಲು ಇದು ಉತ್ತಮ ಮಾರ್ಗವೆಂದು ತೋರುತ್ತದೆಯಾದರೂ, ಇದರಿಂದ ನೀವು ಆಸ್ತಮಾ, ಅಲರ್ಜಿಗಳು ಮತ್ತು ಇತರ ಶ್ವಾಸಕೋಶದ ಕಾಯಿಲೆಗಳನ್ನು ಹೊಂದಿದ್ದರೆ ಅದು ಹೆಚ್ಚಾಗಬಹುದು.