ಮನೆಯ ಹಿತ್ತಲಿನಲ್ಲಿದ್ದ ಗಿಡವನ್ನೇ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ. ದೊಡ್ಡ ಪತ್ರೆಯಲ್ಲಿ ವಿಟಮಿನ್ ʼಸಿʼ, ಫೈಬರ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡಪತ್ರೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಚರ್ಮದ ಸೋಂಕು ಕಡಿಮೆ ಮಾಡಲು: ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.
ಜೀರ್ಣ ಶಕ್ತಿ ಹೆಚ್ಚಳ:ಬಹುತೇಕರಲ್ಲಿ ಜೀರ್ಣ ಶಕ್ತಿಯ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಸುಲಭವಾಗಿ ಜೀರ್ಣ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಪ್ರತಿನಿತ್ಯ ದೊಡ್ಡಪತ್ರೆಯ ಎಲೆಯನ್ನು ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.
ಕಟ್ಟಿದ ಮೂಗಿನಿಂದ ನಿವಾರಣೆ:ಒಮ್ಮೆ ಮೂಗು ಕಟ್ಟಿದ್ದು ಅಂದರೆ ಬಹುತೇಕರಿಗೆ ಉಸಿರಾಡಲು ಕಷ್ಟ.. ಇಂತಹ ಸಂದರ್ಭದಲ್ಲಿ ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು.
ಗ್ಯಾಸ್ಟ್ರಿಕ್ ತಡೆಯುತ್ತದೆ:ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕಾಡುವ ಸಮಸ್ಯೆಯೆಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ. ನಿಯಮಿತವಾಗಿ ದೊಡ್ಡಪತ್ರೆ ಎಲೆಯನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಬಹುದು.ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.
ಮಕ್ಕಳ ಜ್ವರ ನಿವಾರಣೆ:ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ.
ಕಣ್ಣಿನ ಉರಿ ಕಡಿಮೆ ಮಾಡಲು:ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ಇದನ್ನು ನಿತ್ಯ ತಲೆಗೆ ಹಾಕುವುದರಿಂದ ತಲೆ ತಂಪಾಗುವುದರೊಂದಿಗೆ ಕಣ್ಣುರಿ ಕಡಿಮೆಯಾಗುತ್ತದೆ.
ಭೇದಿ ನಿಯಂತ್ರಣಕ್ಕೆ: ದೊಡ್ಡಪತ್ರೆ ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಜೇನು ಅಥವಾ ಕಲ್ಲುಸಕ್ಕರೆಯನ್ನು ಸೇರಿಸಿ ದಿನಕ್ಕೆ 3 ಬಾರಿ ಕುಡಿಯುವುದರಿಂದ ಭೇದಿಯು ಕಡಿಮೆಯಾಗುತ್ತದೆ.
ಕಫ ನಿವಾರಣೆಗೆ:ದೊಡ್ಡಪತ್ರೆಯ ಹಸಿ ಎಲೆಯ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.
ಪಿತ್ತದ ಸಮಸ್ಯೆ ದೂರ ಮಾಡಲು: ದೊಡ್ಡಪತ್ರೆಯ ಎಲೆಗಳನ್ನು, ಒಂದೆರಡು ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು. ಈ ರಸವನ್ನು ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಪಿತ್ತ ಮತ್ತು ಪಿತ್ತದ ಸಮಸ್ಯೆಗಳಿಂದ ಸುಲಭವಾಗಿ ದೂರವಾಗಬಹುದು.