ಹಿಂದೆ ಸಕ್ಕರೆ ಕಾಯಿಲೆ ಅಂದರೆ ಜನರು ಭೀತಿಪಡುತ್ತಿದ್ದರು. ಆದರೆ ಇಂದು ಅದು ಸಾಮಾನ್ಯ ವಿಚಾರ ಎನ್ನುವಂತಾಗಿದೆ. ಯಾಕೆಂದರೆ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರಲ್ಲೂ ಇದು ಕಾಡುವುದು. ಹೀಗಾಗಿ ಮಧುಮೇಹಿಗಳ ಸಂಖ್ಯೆ ವಿಶ್ವ ಮಟ್ಟದಲ್ಲೂ ಹೆಚ್ಚಾಗುತ್ತಲಿದೆ. ಇದರ ನಿಯಂತ್ರಣ ಸಾಧ್ಯವಿಲ್ಲವೇ ಎಂದು ಕೇಳಿದರೆ ಆಗ ಖಂಡಿತವಾಗಿಯೂ ಇದನ್ನು ನಿಯಂತ್ರಿಸಬಹುದು.
ಕೊತ್ತಂಬರಿ ಬೀಜ ಅಥವಾ ಕೊತ್ತಂಬರಿ ಸೊಪ್ಪು ಎಲ್ಲರ ಅಡುಗೆ ಮನೆಯಲ್ಲಿ ಕಾಣ ಸಿಗುತ್ತೆ. ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಈ ಸೊಪ್ಪಿನ ಬಳಕೆ ಕೂಡ ಅಷ್ಟಕಷ್ಟೇ ಎನ್ನಬಹುದು. ಆದರೆ ಇದರಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡರೆ ಮುಂದೆ ಪ್ರತಿ ಆಹಾರ ಪದಾರ್ಥಗಳಲ್ಲೂ ಕೊತ್ತಂಬರಿ ಬಳಸುತ್ತೀರಿ.
ಅದರಲ್ಲೂ ಕೊತ್ತಂಬರಿ ಬೀಜದ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಲ್ಲದೆ ಮಧುಮೇಹವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು ಅಸಾಧ್ಯ. ಹೀಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಆಗ ಖಂಡಿತವಾಗಿಯೂ ಅದರಿಂದ ಲಾಭವಿದೆ ಮತ್ತು ಜೀವಿತಾವಧಿ ಹೆಚ್ಚಿಸಬಹುದು.
ಮಧುಮೇಹ ನಿಯಂತ್ರಣಕ್ಕೆ ಕೊತ್ತಂಬರಿ ನೀರು ಹೇಗೆ ನೆರವಾಗುವುದು?
ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಬಳಸಲ್ಪಡುವಂತಹ ಕೊತ್ತಂಬರಿ ಬೀಜವು ಮಧುಮೇಹ ಸಹಿತ ಹಲವಾರು ರೀತಿಯ ಆರೋಗ್ಯ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಸಾಂಬಾರ ಪದಾರ್ಥ. ಕೊತ್ತಂಬರಿ ಬೀಜವನ್ನು ಸೇವನೆ ಮಾಡಿದ ವೇಳೆ ಅದರ ಅಂಶವು ರಕ್ತದೊಳಗೆ ಸೇರಿಕೊಂಡು ಹೈಪರ್ ಗ್ಲೈಸೆಮಿಕ್ ವಿರೋಧಿ, ಇನ್ಸುಲಿನ್ ಚಲನೆಯನ್ನು ಉತ್ತಮಪಡಿಸುವುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು ಎಂದು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಯು ಹೇಳಿದೆ.
ದೇಹದಲ್ಲಿ ಇನ್ಸುಲಿನ್ ಬಿಡುಗಡೆಯನ್ನು ಇದು ನಿಯಂತ್ರಿಸುವ ಮೂಲಕವಾಗಿ ಪರೋಕ್ಷವಾಗಿ ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಎಂದು ಹೇಳಲಾಗುತ್ತದೆ. ಮೇದೋಜೀರಕ ಗ್ರಂಥಿಗಳು ಬಿಡುಗಡೆ ಮಾಡುವಂತಹ ಪ್ರಮುಖ ಹಾರ್ಮೋನ್ ಇನ್ಸುಲಿನ್ ದೇಹದಲ್ಲಿ ಸಕ್ಕರೆಯನ್ನು ಉಪಯೋಗಿಸುವಲ್ಲಿ ನೆರವಾಗುವುದು. ಇನ್ಸುಲಿನ್ ಸರಿಯಾಗಿ ಬಿಡುಗಡೆ ಆಗದೆ ಇದ್ದರೆ ಆಗ ದೇಹವು ಬೇಕಾಗಿರುವಂತಹ ಸಕ್ಕರೆಯನ್ನು ಚಯಾಪಚಗೊಳಿಸಲು ವಿಫಲವಾಗುವುದು. ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುವುದು.
ಕೊತ್ತಂಬರಿ ಬೀಜದ ನೀರು ತಯಾರಿಸುವುದು ಹೇಗೆ?
10 ಗ್ರಾಂನಷ್ಟು ಕೊತ್ತಂಬರಿ ಬೀಜವನ್ನು ಹುಡಿ ಮಾಡಿಕೊಳ್ಳಿ.
ಒಂದು ಪಾತ್ರೆಗೆ ಈ ಹುಡಿ ಹಾಖಿ ಮತ್ತು ಇದಕ್ಕೆ 2 ಲೀಟರ್ ನೀರು ಹಾಕಿ.
ಇದನ್ನು ರಾತ್ರಿ ಹಾಗೆ ಬಿಡಿ ಅಥವಾ 4-5 ಗಂಟೆ ಕಾಲ ಹಾಗೆ ಬಿಡಿ.
ಇದರ ಬಳಿಕ ನೀರನ್ನು ಸೋಸಿಕೊಳ್ಳಿ.
ಈ ನೀರನ್ನು ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಇದನ್ನು ನೀವು ದಿನವಿಡಿ ಕುಡಿಯಬಹುದು. ಆದರೆ ಅತಿಯಾಗಿ ಕುಡಿಯಬೇಡಿ.
ಈ ನೀರು ತಯಾರಿಸಿಕೊಂಡು ಮಧುಮೇಹಿಯಾಗಿದ್ದರೆ ಕುಡಿಯಿರಿ. ನಿಮ್ಮ ಕುಟುಂಬ, ಸ್ನೇಹಿತರಲ್ಲಿ ಯಾರಾದರೂ ಮಧುಮೇಹಿಗಳಿದ್ದರೆ ಆಗ ಅವರಿಗೆ ಈ ನೀರು ಕುಡಿಯಲು ಹೇಳಿ.