ಪಿಪಿಎಫ್ ಯೋಜನೆಯ ಕೆಲ ನಿಯಮಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಅಕೌಂಟ್ ತೆರೆದಿರುವವರು, ಅಥವಾ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದಿರುವವರು, ಮತ್ತು ಪಿಪಿಎಫ್ ಖಾತೆ ಹೊಂದಿರುವ ಎನ್ಆರ್ಐಗಳು ತಪ್ಪದೇ ಈ ಹೊಸ ನಿಯಮವನ್ನು ಗಮನಿಸಬೇಕು.
ಆಗಸ್ಟ್ 21ರಂದು ಹಣಕಾಸು ಸಚಿವಾಲಯ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮಗಳು ಚಾಲನೆಗೆ ಬರಲಿವೆ.
ಯಾವುದೇ ವಯಸ್ಸಿನವರು ಪಿಪಿಎಫ್ ಖಾತೆ ತೆರೆಯಬಹುದು. ಅಪ್ರಾಪ್ತರಾದರೆ ಅವರ ಹೆಸರಿನಲ್ಲಿ ಪಾಲಕರು ಖಾತೆ ತೆರೆಯಬಹುದು. ಈಗ ಒಂದು ಬದಲಾವಣೆ ಮಾಡಲಾಗಿದೆ. ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದಾದರೂ ಅವರು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಹೂಡಿಕೆ ಹಣಕ್ಕೆ ಶೇ. 7.1ರಷ್ಟು ಬಡ್ಡಿ ದಕ್ಕುವುದಿಲ್ಲ. ಸೇವಿಂಗ್ಸ್ ಅಕೌಂಟ್ಗೆ ಸಿಗುವಷ್ಟೇ ಬಡ್ಡಿ ಮಾತ್ರ ಅದಕ್ಕೆ ಸಿಗುತ್ತದೆ.
ಪ್ರಾಪ್ತ ವಯಸ್ಸಿಗೆ ಬಂದ ನಂತರದಿಂದ ಪಿಪಿಎಫ್ನ ಮೆಚ್ಯೂರಿಟಿ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ 18 ವರ್ಷ ವಯಸ್ಸಾದ ನಂತರ 15 ವರ್ಷಕ್ಕೆ ಪಿಪಿಎಫ್ ಮೆಚ್ಯೂರ್ ಆಗುತ್ತದೆ. ಈ ಅವಧಿಯಲ್ಲಿ ಘೋಷಿತ ಬಡ್ಡಿದರ ನೀಡಲಾಗುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಖಾತೆ ಮಾತ್ರವೇ ರಚಿಸಬಹುದು. ಎರಡು ಖಾತೆ ತೆರೆದಿದ್ದರೆ, ಮೊದಲ ಖಾತೆಯನ್ನು ಪ್ರೈಮರಿ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ಈ ಪ್ರಾಥಮಿಕ ಖಾತೆಗೆ ಮಾತ್ರವೇ ನಿಗದಿತ ಬಡ್ಡಿದರ ಸಿಗುತ್ತದೆ. ಎರಡನೇ ಖಾತೆಗೆ ಏನೂ ಸಿಗುವುದಿಲ್ಲ. ಎರಡನೇ ಖಾತೆಯಲ್ಲಿನ ಹಣವನ್ನು ಪ್ರೈಮರಿ ಖಾತೆಗೆ ವಿಲೀನ ಮಾಡಲಾಗುತ್ತದೆ. ಇದರಲ್ಲಿ ಒಂದೂವರೆ ಲಕ್ಷ ರೂಗಿಂತ ಹೆಚ್ಚು ಹಣ ಇದ್ದಲ್ಲಿ ಆ ಹೆಚ್ಚುವರಿ ಹಣವನ್ನು ಯಾವುದೇ ಬಡ್ಡಿ ಇಲ್ಲದೇ ಮರಳಿಸಲಾಗುತ್ತದೆ.