ಮನೆಯಲ್ಲಿ ನಿಮಗೆ ಬೇಕಾದ ತಿನಿಸನ್ನು ಮಾಡಿ ತಿನ್ನಲು ಕಲಿಯಬೇಕು. ಇತ್ತೀಚೆಗೆ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವುದು ಪಾನಿಪುರಿ. ಕಡಿಮೆ ಹಣದಲ್ಲಿ ಸಿಗುವ, ನಾಲಿಗೆ ರುಚಿ ತಣಿಸುವ ಪಾನಿಪೂರಿ ಹಲವರ ಫೇವರಿಟ್. ಇದರಲ್ಲಿ ಹಲವು ವಿಧಗಳಿವೆ. ಮಸಾಲಾ ಪೂರಿ, ಆಲೂ ಪೂರಿ, ಸೇವ್ ಪೂರಿ, ಗೋಲ್ಗಪ್ಪ ಹೀಗೆ.
ಪಾನಿಪೂರಿಯನ್ನು ಮನೆಯಲ್ಲೇ ಮಾಡುವುದು ಕಷ್ಟ ಎಂದುಕೊಂಡಿದ್ದಾರೆ ಹಲವರು. ಆದರೆ ಕೊರೊನಾ ಲಾಕ್ಡೌನ್ ಸಮಯದಲ್ಲಿ ಹಲವರು ಪಾನಿಪುರಿ ಮಾಡಲು ಕಲಿತಿದ್ದಾರೆ. ಮನೆಯಲ್ಲೇ ಆರೋಗ್ಯಕರವಾಗಿ ಪಾನಿಪೂರಿ ತಯಾರಿಸಿಕೊಂಡು ತಿನ್ನುತ್ತಿದ್ದಾರೆ. ನಿಮಗಿನ್ನೂ ಮಾಡೋಕೆ ಬರೋಲ್ವಾ? ಇಲ್ಲಿದೆ ರೆಸಿಪಿ.
ಪೂರಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ಫೇಣಿ (ಚಿರೋಟಿ) ರವೆ 1 ಬಟ್ಟಲು, ಮೈದಾಹಿಟ್ಟು 2 ಚಮಚ, ಅಡುಗೆ ಸೋಡಾ 1 ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ನೀರು 1/4 ಬಟ್ಟಲು, ಎಣ್ಣೆ 3-4 ಚಮಚ
ತಯಾರಿಸುವ ವಿಧಾನ: ಮೊದಲಿಗೆ ರವೆಯನ್ನು ಒಂದು ಕಡಾಯಿಗೆ ಹಾಕಿಕೊಂಡು ಮೈದಾ ಉಪ್ಪು ಮತ್ತು 2 ಚಮಚ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ ಕಲೆಸಿ ನೀರು ಹಾಕಿ ಚೆನ್ನಾಗಿ ನಾದಬೇಕು. ಪೂರ್ತಿಯಾಗಿ ಚೆನ್ನಾಗಿ ನಾದಿ ಅದರ ಮೇಲೆ ಒಂದು ಚಮಚ ಎಣ್ಣೆಯನ್ನು ಹಾಕಿ ಗಾಳಿಯಾಡದಂತೆ ಬಟ್ಟೆ ಅಥವಾ ಪ್ಲಾಸ್ಟಿಕ್ ಕವರ್ ನಿಂದ ಬಿಗಿಯಾಗಿ 25-30 ನಿಮಿಷ ಕಟ್ಟಿಡಿ.
ಅರ್ಧ ಗಂಟೆಯ ನಂತರ ಮತ್ತೆ ಸ್ವಲ್ಪ ನಾದಿಕೊಂಡು ಸ್ವಲ್ಪ ದೊಡ್ಡ ದೊಡ್ಡ ಉಂಡೆ ಮಾಡಿಕೊಂಡು ಚಪಾತಿ ಲಟ್ಟಿಸಿದಂತೆ ಲಟ್ಟಿಸಿರಿ ಅದರ ಮೇಲೆ ಸಣ್ಣ ಬಟ್ಟಲಿನಿಂದ ಒತ್ತಿ ತೆಗೆಯಿರಿ ನಂತರ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾದ ನಂತರ ಸ್ವಲ್ಪ ಸ್ವಲ್ಪ ಪೂರಿಗಳನ್ನು ಹಾಕಿ ಕರಿಯಿರಿ.
ಪಾನಿ ಮಾಡುವ ವಿಧಾನ
ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು- ಅರ್ಧ ಹಿಡಿ, ಹಸಿಮೆಣಸಿನಕಾಯಿ -6, ಜೀರಿಗೆ ಅರ್ಧ ಚಮಚ, ಮೆಣಸು ಅರ್ಧ ಚಮಚ, ಹುಣಸೇಹಣ್ಣು ಅರ್ಧ ನಿಂಬೆಹಣ್ಣಿನಷ್ಟು ಗಾತ್ರ, ಬೆಲ್ಲ ಸ್ವಲ್ಪ ಅಥವಾ ಸಕ್ಕರೆ ಎರಡು ಚಮಚ, ಬೆಳುಳ್ಳಿ ಐದು ಎಸಳು, ಶುಂಠಿ ಕಡಲೆ ಕಾಳಿನಷ್ಟು
ತಯಾರಿಸುವ ವಿಧಾನ: ಇಷ್ಟನ್ನೂ ನುಣ್ಣಗೆ ರುಬ್ಬಿ ತರಿ ಇದ್ದರೆ ಸೋಸಿ ಬರಿಯ ಮಸಾಲೆ ನೀರು ಉಳಿಯಬೇಕು. ಆ ತರಹ ನುಣ್ಣಗೆ ಇರಬೇಕು. ಇದನ್ನು ಒಂದು ಲೀಟರ್ ತಣ್ಣಗಿನ ನೀರಿಗೆ ಹಾಕಿ, ಫ್ರಿಡ್ಜ್ ನೀರು ಅಥವಾ ಮಡಿಕೆ ನೀರು ಸೂಕ್ತ. ಆದರೆ ಇತ್ತೀಚೆಗೆ ಕಾಣ ಸಿಗೋದು ಬಲು ಅಪರೂಪ ಹಾಗಾಗಿ ತಣ್ಣನೆಯ ನೀರನ್ನು ಬಳಸಬಹುದು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಾಲಾನಮಕ್ ಅಂತ ಪಾನಿಪೂರಿ ಗೆ ಹಾಕಲೆಂದೇ ಸಿಗುತ್ತದೆ ಅದು ವಿಶೇಷ ಉಪ್ಪಿನ ರುಚಿ ಕೊಡುತ್ತದೆ ಸಿಕ್ಕರೆ ಅದು ಹಾಕಿ.
ಪೂರಿ ಒಳಗೆ ತುಂಬಲು ಬಳಸುವ ಸಾಮಗ್ರಿ:
ಆಲೂಗಡ್ಡೆ ಹಾಗೂ ನೆನೆಸಿದ ಬಟಾಣಿ.
ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಜೊತೆ ಬಟಾಣಿ ಸೇರಿಸಿ ತೆಗೆದಿಡಿ. ಸಣ್ಣಗೆ ಒಂದೇ ರೀತಿಯಲ್ಲಿ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ತುರಿ, ತಾಜಾ ಕೊತ್ತಂಬರಿ ಸೊಪ್ಪು ಇಷ್ಟನ್ನೂ ಬೆರೆಸಿಕೊಳ್ಳಿ. ಖಾರಾ ಸೇವ್ ಬರೀ ಕಡಲೆ ಹಿಟ್ಟಿನದ್ದು ಬೇರೆ ಏನೂ ಮಿಕ್ಸ್ ಇರಬಾರದು.
ಈಗ ರೆಡಿ ಮಿನಿ ಪೂರಿಗಳನ್ನು ಮಧ್ಯದಲ್ಲಿ ಹೆಬ್ಬೆರಳಿನಲ್ಲಿ ಅದುಮಿ ಸ್ಥಳಾವಕಾಶ ಮಾಡಿಕೊಂಡು ಆಲೂಗಡ್ಡೆ ಬಟಾಣಿ ಮಿಕ್ಸ್ ಹಾಕಿಕೊಳ್ಳಿ. ಇದಕ್ಕೆ ಹಸಿ ಕ್ಯಾರೆಟ್ ತುರಿ ಈರುಳ್ಳಿ ಕೊತ್ತಂಬರಿ ಸೊಪ್ಪು ಮಿಶ್ರಣ ಸ್ವಲ್ಪ ಹಾಕಿ. ನಂತರ ಖಾರಾಸೇವ್ ಹಾಕಿ ಪೂರಿಗೆ ಪಾನಿ ತುಂಬಲು ಸ್ವಲ್ಪ ಗ್ಯಾಪ್ ಕೊಡಿ. ಎಲ್ಲಾ ಪೂರಿಗಳನ್ನು ಒಂದು ಪ್ಲೇಟ್ಗೆ ಜೋಡಿಸಿ ಇನ್ನೇನು ಪಾನಿ ಹಾಕಬೇಕು ಎನ್ನುವಾಗ ಒಂದೆರಡು ಹನಿ ನಿಂಬೆರಸ ಹಾಕಿ. ಹೀಗ ರುಚಿಕರವಾದ ಸ್ನ್ಯಾಕ್ಸ್ ರೆಡಿ.