ತರಕಾರಿ ಹೆಚ್ಚುವುದು ಅಷ್ಟು ಸುಲಭದ ಮಾತಲ್ಲ! ಇದರ ಕಷ್ಟ ಏನೆಂದು ಮನೆಯಲ್ಲಿ ದಿನಾ ಅಡುಗೆ ಮಾಡುವ ಹೆಂಗಸರ ಬಳಿ ಒಮ್ಮೆ ಕೇಳಿ ನೋಡಿ! ಅರೆ ತರಕಾರಿ ಹೆಚ್ಚುವುದು ಎಂದರೆ ಅಷ್ಟೊಂದು ಕಷ್ಟಾನಾ ಎಂದು ನಿಮಗೆ ಅನಿಸಬಹುದು, ಆದರೆ ಬೆಳಗಿನ ಸಮಯದಲ್ಲಿ ಅರ್ಜೆಂಟಾಗಿ ಸಾಂಬಾರ್ ಮಾಡಬೇಕಾದರೆ ಅಥವಾ ತರಕಾರಿ ಬಳಸಿ ಬೆಳಗಿನ ತಿಂಡಿ ರೆಡಿ ಮಾಡಲು,ತರಕಾರಿಗಳನ್ನು ಸರಿಯಾಗಿ ಸ್ವಚ್ಛ ಮಾಡಿ, ಬೇಗಬೇಗನೇ ಇವುಗಳನ್ನು ಹೆಚ್ಚುವುದು ಎಂದರೆ ಅಷ್ಟು ಸುಲಭದ ಮಾತಲ್ಲ!
ತರಕಾರಿ ಅಚ್ಚಲು ಅನೇಕ ಮಂದಿ ಮರದ ಹಲಗೆಯನ್ನು ಬಳಸಲು ಶುರು ಮಾಡಿದ್ದಾರೆ. ಆದರೆ ಈ ಮರದ ಹಲಗೆಯ ಬಳಕೆಯೂ ಒಳ್ಳೆಯದಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಅಷ್ಟಕ್ಕೂ ಈ ಮಾತು ಎಷ್ಟು ಸತ್ಯ ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.
ಪ್ಲಾಸ್ಟಿಕ್ ಒಳ್ಳೆಯದಲ್ಲ ಎಂದು ಮರದ ಹಲಗೆಯ ಮೇಲೆ ತರಕಾರಿ ಕಟ್ ಮಾಡುವವರಿಗೆ ಈ ವಿಚಾರ ಕೇಳಿದ್ರೆ ಆಶ್ಚರ್ಯ ಎನಿಸಬಹುದು. ಆದರೆ ನಿಜಕ್ಕೂ ತರಕಾರಿಗಳನ್ನು ಕತ್ತರಿಸಲು ನಾವು ಬಳಸುವ ಮರದ ಹಲಗೆ ಸುರಕ್ಷಿತವಲ್ಲ. ಏಕೆಂದರೆ ಮರವು ಸ್ವಭಾವತಃ ಸರಂಧ್ರವಾಗಿದೆ. ಅಂದರೆ ನಾವು ಕತ್ತರಿಸಿದ ಆಹಾರದಿಂದ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಟೊಮೆಟೊ ರಸ, ಕಚ್ಚಾ ಕೋಳಿ ಪೀಸ್ಗಳು ಅಥವಾ ಶುಂಠಿ ಮತ್ತು ಬೆಳ್ಳುಳ್ಳಿ ರಸ ಮರದ ಹಲಗೆಯಿಂದ ಸುಲಭವಾಗಿ ಹೀರಲ್ಪಡುತ್ತವೆ. ಈ ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಕಾಲಾನಂತರದಲ್ಲಿ, ಈ ಮರದ ಹಲಗೆಗಳು ಸ್ಕ್ರಾಚ್ ಆಗಲು ಆರಂಭವಾಗುತ್ತದೆ. ಈ ಸಣ್ಣ ಬಿರುಕುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಹ ಕಷ್ಟವಾಗುತ್ತದೆ. ಅಲ್ಲದೇ ಸಾಲ್ಮೊನೆಲ್ಲಾ, ಇ.ಕೋಲಿ ಮತ್ತು ಲಿಸ್ಟೇರಿಯಾದಂತಹ ಹಾನಿಕಾರಕ ರೋಗಕಾರಕಗಳು ಇದರಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಈ ಬ್ಯಾಕ್ಟೀರಿಯಾಗಳು ನಾವು ತಯಾರಿಸುವ ಆಹಾರವನ್ನು ಕಲುಷಿತಗೊಳಿಸುವುದಲ್ಲದೇ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ. ದಿನಗಳು ಕಳೆದಂತೆ ಈ ಹಲಗೆಗಳ ಸಣ್ಣ ತುಂಡುಗಳು ಆಹಾರ ಪದಾರ್ಥಗಳೊಂದಿಗೆ ಬೆರೆಯುತ್ತದೆ. ತಿಳಿಯದೇ ನಾವು ಇವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಹದಗೆಡುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.