ನವದೆಹಲಿ:- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿದೇಶ ಪ್ರಯಾಣಕ್ಕೆ ಡಿಕೆಶಿ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ದೆಹಲಿ ನ್ಯಾಯಾಲಯದ ತೆಗೆದುಹಾಕಿದ್ದು, ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ.
ಡಿಕೆಶಿ ಸಲ್ಲಿಸಿದ ಅರ್ಜಿಯ ಮೇರೆಗೆ ನವೆಂಬರ್ 29ರಿಂದ ಡಿಸೆಂಬರ್ 3 ರವರೆಗೆ ದುಬೈಗೆ ಪ್ರಯಾಣಿಸಲು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅನುಮತಿ ನೀಡಿದ್ದಾರೆ.
ದುಬೈನಲ್ಲಿ ನಡೆಯಲಿರುವ ಮುಂಬರುವ COP28 ಗೆ ಹಾಜರಾಗಲು COP28 ನಿಯೋಜಿತ ಅಧ್ಯಕ್ಷ ಡಾ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಹಾಗೂ ವಿಶ್ವ ಸಂಸ್ಥೆಯ ಮಹಾ ಪ್ರಧಾನಕಾರ್ಯದರ್ಶಿ ಸೆಕ್ರೆಟರಿ ಜನರಲ್ ಅವರ ಹವಾಮಾನ ಮಹತ್ವಾಕಾಂಕ್ಷೆ ಮತ್ತು ಪರಿಹಾರದ ವಿಶೇಷ ರಾಯಭಾರಿ ಮೈಕೆಲ್ ಆರ್ ಬ್ಲೂಮ್ಬರ್ಗ್ ಆಹ್ವಾನಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದು ವಿಶ್ವಸಂಸ್ಥೆಯು ಆಯೋಜಿಸುವ ವಾರ್ಷಿಕ ಅಂತಾರಾಷ್ಟ್ರೀಯ ಹವಾಮಾನ ಶೃಂಗಸಭೆಯಾಗಿದೆ.
ಭಾರತದ ಸಂವಿಧಾನದ 21ನೇ ವಿಧಿಯ ಪ್ರಕಾರ ವಿದೇಶಕ್ಕೆ ಪ್ರಯಾಣಿಸುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂಬುದು ಕಾನೂನಿನ ಸ್ಥಿರವಾದ ತತ್ವವಾಗಿದೆ. ಆದರೂ, ಇಂತಹ ಹಕ್ಕು ಅನಿಯಂತ್ರಿತವೇನಲ್ಲ. ಸಮಂಜಸವಾದ ನಿರ್ಬಂಧವನ್ನು ಇದರ ಮೇಲೆ ವಿಧಿಸಬಹುದು. ಆರೋಪಿಯು ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಮತ್ತು ವಿಚಾರಣೆ ಎದುರಿಸಲು ಲಭ್ಯವಿಲ್ಲ ಎಂದು ಕಂಡುಬಂದರೆ ತನಿಖೆ ಅಥವಾ ವಿಚಾರಣೆಯ ಸಮಯದಲ್ಲಿ ಹೇಳಿದ ಹಕ್ಕನ್ನು ನಿರ್ಬಂಧಿಸಬಹುದು’ ಎಂದು ನ್ಯಾಯಾಧೀಶರು ನವೆಂಬರ್ 25 ರಂದು ನೀಡಿದ ಆದೇಶದಲ್ಲಿ ಹೇಳಿದರು