ದೇಶದಲ್ಲಿ 11ನೇ ಕೃಷಿ ಗಣತಿಗೆ ಸಿದ್ಧತೆ ನಡೆದಿದ್ದು, ಈ ಬಾರಿ ಗಣತಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಪ್ರತ್ಯೇಕ ಆ್ಯಪ್ ಮೂಲಕ ಕೃಷಿ ಗಣತಿ ಕಾರ್ಯ ನಡೆಯಲಿದೆ. ರಾಜ್ಯದಲ್ಲೂ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ.
11ನೇ ಕೃಷಿ ಗಣತಿಗಾಗಿ ಅಗ್ರಿ 21 – 22 ಎಂಬ ಮೊಬೈಲ್ ಆ್ಯಪ್ ವಿನ್ಯಾಸಗೊಳಿಸಲಾಗಿದ್ದು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಗಣತಿ ನಡೆಯುತ್ತದೆ. ಗ್ರಾಮ ಲೆಕ್ಕಿಗರು ಗಣತಿ ಕಾರ್ಯ ನಡೆಸಲಿದ್ದು, ಕಂದಾಯ ನಿರೀಕ್ಷಕರು, ತಹಸೀಲ್ದಾರ್ಗಳು ಹಂತ ಹಂತವಾಗಿ ಗಣತಿ ಕಾರ್ಯದಲ್ಲಿ ಜವಾಬ್ದಾರಿ ನಿರ್ವಹಿಸುವರು.

ಅಗ್ರಿ 21 – 22 ಆ್ಯಪ್ನ ಲಾಗಿನ್ ಅನ್ನು ರಾಜ್ಯದಿಂದ ಪ್ರತಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ (ಡಿಎಸ್ಒ) ನೀಡಲಾಗಿದೆ. ಡಿಎಸ್ಒಗಳು ಜಿಲ್ಲೆಯ ಎಲ್ಲಾ ತಾಲೂಕು ತಹಸೀಲ್ದಾರ್ಗಳಿಗೆ ಲಾಗಿನ್ ಕ್ರಿಯೇಟ್ ಮಾಡಿಕೊಡುತ್ತಾರೆ. ತಹಸೀಲ್ದಾರ್ಗಳು ತಮ್ಮ ವ್ಯಾಪ್ತಿಯ ಎಲ್ಲಾ ಕಂದಾಯ ನಿರೀಕ್ಷಕರಿಗೆ ಲಾಗಿನ್ ನೀಡುತ್ತಾರೆ. ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಾಗಿನ್ ಕ್ರಿಯೇಟ್ ಮಾಡಿ ಕೊಡಬೇಕು. ಈ ಗ್ರಾಮ ಲೆಕ್ಕಾಧಿಕಾರಿಗಳು ಆ್ಯಪ್ ಡೌನ್ ಮಾಡಿಕೊಂಡು ತಮ್ಮ ಯೂಸರ್ ಐಡಿ, ಪಾಸ್ವರ್ಡ್ ಹಾಕಿ ಲಾಗಿನ್ ಆದರೆ ತಮ್ಮ ವ್ಯಾಪ್ತಿಯ ಹಳ್ಳಿಗಳು, ಖಾತೆಗಳ ವಿವರ ಲಭ್ಯವಾಗುತ್ತವೆ. ನಂತರ ನಿರ್ದಿಷ್ಟ ಮಾದರಿಯಲ್ಲಿ ಗಣತಿ ಕಾರ್ಯವನ್ನು ಮಾಡಿ ದತ್ತಾಂಶ ದಾಖಲೀಕರಿಸಬೇಕು.
ಕೃಷಿ ಗಣತಿಯಲ್ಲಿ ಜಮೀನುಗಳ ಸಂಖ್ಯೆ, ವಿಸ್ತೀರ್ಣ, ವರ್ಗವಾರು ಹಂಚಿಕೆ, ಸಣ್ಣ, ಅತಿ ಸಣ್ಣ, ಮಧ್ಯಮ, ದೊಡ್ಡ ರೈತರನ್ನು ಗುರುತಿಸುವುದು, ಬೆಳೆಗಳ ಸಮಗ್ರ ಮಾಹಿತಿ, ಸಾಗುವಳಿ ಹಿಡುವಳಿದಾರರ ಸಂಖ್ಯೆ, ಭೂ ಬಳಕೆ, ಬೆಳೆ ವಿಭಾಗ, ಉತ್ಪಾದನೆ ಮೊದಲಾದ ಮಾಹಿತಿಗಳನ್ನು ಗಣತಿಯಲ್ಲಿ ಸಂಗ್ರಹಿಸಲಾಗುತ್ತದೆ. ಕೃಷಿಯ ಸಮಗ್ರ ಮಾಹಿತಿ, ದತ್ತಾಂಶ ಸಂಗ್ರಹದ ಆಧಾರದ ಮೇಲೆ ಪ್ರತಿ ಕೃಷಿ ಕ್ಷೇತ್ರದ ರಚನೆ ಮತ್ತು ಗುಣ ಲಕ್ಷಣಗಳನ್ನು ತಿಳಿದು, ಕೃಷಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಮತ್ತು ಪ್ರಗತಿ ಮೌಲ್ಯ ಮಾಪನಕ್ಕೆ ಗಣತಿ ಅಗತ್ಯವಾಗಿದೆ.
