ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸುಪ್ರಸಿದ್ಧ ಘಾಟಿ ಸುಬ್ರಹ್ಮಣ್ಯದಲ್ಲಿ ಮಂಗಳವಾರ ನಡೆದ ಬ್ರಹ್ಮರಥೋತ್ಸವದ ವೇಳೆ ಭಾರೀ ಅನಾಹುತವೊಂದು ತಪ್ಪಿದೆ. ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಥ ಎಳೆಯುವಾಗ ಚಕ್ರದಡಿಗೆ ಸಿಲುಕಿದ್ದ ಏಳು ಮಂದಿ ಭಕ್ತರನ್ನು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಿ.ರವಿ ಹಾಗೂ ಪತ್ರಕರ್ತ ಶಿವರಾಜ್ ನೇಸರ ಅವರು ಪ್ರಾಣಾಪಾಯದಿಂದ ಪಾರು ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ.
ರಥ ಎಳೆಯುವ ಉತ್ಸಾಹದಲ್ಲಿ ಭಕ್ತರು ಕೆಳಕ್ಕೆ ಬಿದ್ದರು. ಅಲ್ಲಿಯೇ ಜನರನ್ನು ನಿಯಂತ್ರಿಸುತ್ತಿದ್ದ ಡಿವೈಎಸ್ಪಿ ರವಿ ಅವರು ರಥ ನಿಲ್ಲಿಸುವಂತೆ ಕೂಗಿಕೊಂಡರು. ಆದರೆ, ಯಾರೂ ಕಿವಿಗೊಡಲಿಲ್ಲ. ಆಗ ಪತ್ರಕರ್ತ ಶಿವರಾಜ ನೇಸರ ಅವರು ಮಹಿಳೆ ಸೇರಿದಂತೆ ಏಳೂ ಜನರನ್ನು ಚಕ್ರ ಸಾಗುವ ಹಾದಿಯಿಂದ ಹೊರದೂಡಿ ಅಪಾಯದಿಂದ ಪಾರು ಮಾಡಿದರು. ಆ ಬಳಿಕ ಚಕ್ರ ಮುಂದಕ್ಕೆ ಸಾಗಿತು.
ಒಟ್ಟಾರೆ ಅಧಿಕಾರಿ ಹಾಗೂ ಪತ್ರಕರ್ತರ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಅವಘಡವೊಂದು ತಪ್ಪಿತು. ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸರ್ಪ ದೋಷ ಪರಿಹಾರ ಸೇರಿದಂತೆ ವಿವಿಧ ರೀತಿಯ ನಾಗಾರಾಧನೆಗೆ ಇದು ಪ್ರಸಿದ್ದವಾಗಿದೆ. ಇತಿಹಾಸ ಪ್ರಸಿದ್ದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ಪ್ರಯುಕ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.