ಬೆಳಗಾವಿ:– ರಾಜ್ಯದಲ್ಲಿ 187 ಸ್ಥಳಗಳನ್ನು ಅಪಘಾತ ಮುಕ್ತ ಸ್ಥಳಗಳಾಗಿ ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಪರವಾಗಿ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳಲ್ಲಿನ ಅಡಿಯಲ್ಲಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿನ 187 ಕಪ್ಪು ಸ್ಥಳಗಳನ್ನು( ಅಪಘಾತ ವಲಯಗಳನ್ನು) ರೂ.
232 ಕೋಟಿ ಅಂದಾಜು ಮೊತ್ತದಲ್ಲಿ ಪಿ.ಆರ್.ಎ.ಎಂ.ಸಿ ವತಿಯಿಂದ ಅಭಿವೃದ್ದಿಪಡಿಸಿ ಅಪಘಾತ ಮುಕ್ತ ಸ್ಥಳಗಳನ್ನಾಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 182 ಕಪ್ಪುಸ್ಥಳಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಉಳಿದ 5 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದುವರೆಗೆ ಸದರಿ ಕಪ್ಪು ಸ್ಥಳಗಳ ಅಭಿವೃದ್ದಿಗೆ ರೂ. 138.41 ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಪಿ.ಆರ್.ಎ.ಎಂ.ಸಿ ವತಿಯಿಂದ ಹಾಗೂ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳ ಅಡಿಯಲ್ಲಿನ ವಿಭಾಗಗಳ ವತಿಯಿಂದ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿರುವ ಒಟ್ಟು 205 ಕಪ್ಪು ಸ್ಥಳಗಳ ಅನುಷ್ಠಾನ್ನೊತ್ತರ ಅಧ್ಯಯನ ವನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ವಿವಿಧ ತಾಂತ್ರಿಕ ಕಾಲೇಜುಗಳಿಗೆ ವಹಿಸಿಕೊಡಲಾಗಿದ್ದು, ಇಲ್ಲಿಯವರೆಗೆ ಅಭಿವೃದ್ಧಿಪಡಿಸಲಾದ 99 ಕಪ್ಪು ಸ್ಥಳಗಳ 3 ವರ್ಷಗಳ ವಾರ್ಷಿಕವಾರು ಅಧ್ಯಯನ ವರದಿಗಳು ಸ್ವೀಕೃತವಾಗಿದ್ದು, ಸದರಿ ಅಧ್ಯಯನ ವರದಿಯಾನುಸಾರ ಅಭಿವೃದ್ಧಿಪಡಿಸಲಾದ ಕಪ್ಪು ಸ್ಥಳಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂದಿರುತ್ತದೆ ಎಂದು ತಿಳಿಸಿದರು.