ಮಂಡ್ಯ ಜಿಲ್ಲೆಯಲ್ಲಿ ನವೆಂಬರ್ 6 ರಿಂದ ನವೆಂಬರ್ 16ರವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಈ ಪರಿಕ್ಷೆಯಲ್ಲಿ ಮಂಡ್ಯ ಪದವಿ ಪೂರ್ವ ಇಲಾಖೆಯ ಅಧಿಕಾರಿಗಳು ಮಾಡಿರುವ ಯಡವಟ್ಟನ್ನು ಖಾಸಗಿ ಕಾಲೇಜಿನವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಪರೀಕ್ಷೆಗೆ ಆಯಾ ದಿನವೇ ಪ್ರಶ್ನೆ ಪತ್ರಿಕೆಯನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ನಿಗಧಿ ಪಡಿಸಿದ ಸ್ಥಳದಿಂದ ತೆಗೆದುಕೊಂಡು ಹೋಗಬೇಕು.
ಆದರೆ ಮಂಡ್ಯ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷೆಗೂ ಮೂರು ದಿನಗಳ ಮುನ್ನವೆ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲೆಯ ಎಲ್ಲಾ ಪಿಯು ಕಾಲೇಜುಗಳಿಗೆ ನೀಡಿದ್ದಾರೆ. ಇದನ್ನು ಇದೀಗ ಖಾಸಗಿ ಕಾಲೇಜಿನ ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇಂದು ವೇಳಪಟ್ಟಿಯ ಪ್ರಕಾರ ವಿಜ್ಞಾನ ವಿಭಾಗದ ಪ್ರಥಮ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರ ಪರೀಕ್ಷೆ ನಡೆಸಬೇಕಾಗಿತ್ತು.
ಆದರೆ ಮೂರು ದಿನಗಳ ಹಿಂದೆಯೇ ಪ್ರಶ್ನೆ ಪತ್ರಿಕೆ ದೊರಕಿರುವ ಕಾರಣ ಮಂಡ್ಯದ ಕಾರ್ಮಲ್ ವಿದ್ಯಾ ಸಂಸ್ಥೆ ಜೀವಶಾಸ್ತ್ರ ಪರೀಕ್ಷೆಯನ್ನು ಎರಡು ದಿನಗಳ ಹಿಂದೆಯೇ ನಡೆಸಿದೆ. ಆ ಸಂಸ್ಥೆಯ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳನ್ನು ಕೈ ಬರವಣಿಗೆಯಲ್ಲಿ ಬರೆದು ವಾಟ್ಸ್ಆ್ಯಪ್ ಮೂಲಕ ಜಿಲ್ಲೆಯ ವಿವಿಧ ವಿದ್ಯಾರ್ಥಿಗಳಿಗೆ ಕಳಿಸುತ್ತಿದ್ದಾರೆ. ಈ ಮೂಲಕ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲಾಗುತ್ತಿದೆ.
ಮಧ್ಯ ವಾರ್ಷಿಕ ಪರೀಕ್ಷೆ ಮಾರ್ಕ್ಸ್ನ್ನು ನೋಡಿ 20 ಅಂಕಗಳಿಗೆ ಇಂಟರ್ನಲ್ಸ್ ಸಹ ಕೊಡಲಾಗುತ್ತೆ. ಹೀಗಿರುವಾಗ ಮೊದಲೇ ಪ್ರಶ್ನೆ ಪತ್ರಿಕೆ ಹೀಗೆ ಸೋರಿಕೆ ಆದ್ರೆ ಹೇಗೆ ಎಂಬುದರ ಪ್ರಶ್ನೆ ಇದೀಗ ಎದುರಾಗಿದೆ. ಇನ್ನೂ ಕಾರ್ಮಲ್ ವಿದ್ಯಾ ಸಂಸ್ಥೆಯಲ್ಲಿ ಮೊದಲೇ ಪರೀಕ್ಷೆ ನಡೆದಿದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ಪರೀಕ್ಷೆ ನಡೆದಿರುವುದು ರುಜುವಾತಾಗಿದೆ. ಹೀಗಾಗಿ ಅಧಿಕಾರಿಗಳು ಈ ವಿದ್ಯಾ ಸಂಸ್ಥೆಯ ಮೇಲೆ ಶಿಸ್ತು ಕ್ರಮಕ್ಕೆ ಸಹ ಮುಂದಾಗಿದ್ದಾರೆ.