ಮೆಲ್ಬೊರ್ನ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮೂರನೇ ದಿನದಲ್ಲಿಯೇ ಅಂತ್ಯವಾಗಿದೆ. ಈ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಮಣಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.
ಇಂದು ಬೆಳಗ್ಗಿನ ಪಂದ್ಯ ಇಂಗ್ಲೆಂಡ್ ದುಃಸ್ವಪ್ನದ ಮುಂಜಾನೆಯಾಗಿತ್ತು. ಆದರೆ ವೇಗಿ ಸ್ಕಾಟ್ ಬೋಲ್ಯಾಂಡ್ ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್‌ಗಳ ರೋಚಕ ಬೌಲಿಂಗ್ ಮೂಲಕ ಆಸ್ಟ್ರೇಲಿಯಾ ತನ್ನ ತವರು ನೆಲದಲ್ಲಿ ಗೆದ್ದು ಸಂಭ್ರಮಿಸಿದೆ . 19 ಎಸೆತಗಳಲ್ಲಿ 5 ಇಂಗ್ಲೆಂಡ್ ಬ್ಯಾಟರ್‌ಗಳ ವಿಕೆಟ್ ಪಡೆಯುವ ಮೂಲಕ ಬೋಲ್ಯಾಂಡ್ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ 3 ನೇ ಅತಿವೇಗದ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಒಟ್ಟು 6 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 185 ರನ್‌ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 68 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಹೋರಾಟವನ್ನು ಮುಕ್ತಾಯಗೊಳಿಸಿದೆ.