ಚಾಮರಾಜನಗರ:- ತಾಲೂಕಿನ ಕೊತ್ತಲವಾಡಿ ಸಮೀಪದ ಮೇಲೂರು ಗ್ರಾಮದ ಕರಿಕಲ್ಲು ಕ್ವಾರಿ ಬಳಿಯ ಪಾಳು ಬಿದ್ದಿರುವ ಜಮೀನಿನಲ್ಲಿ ಗುರುವಾರ ಸಂಜೆ ಎರಡು ಹುಲಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೇಲೂರು-ತೆರಕಣಾಂಬಿ ಗ್ರಾಮಗಳ ಗಡಿಭಾಗದಲ್ಲಿರುವ ಮೇಲೂರು ಗ್ರಾಮದ ಸ.ನಂ ೧೦೭ರ ಪಾಳು ಬಿದ್ದಿರುವ ಜಮೀನಿನ ಎರಡು ಕಡೆ ಒಂದು ವಯಸ್ಕ ಹಾಗೂ ಮರಿ ಹುಲಿಗಳ ಕಳೇಬರ ಪತ್ತೆಯಾಗಿದ್ದು ಕಳೆದ ೨೦ ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನ ಸಲಹೆಗಾರ ಡಾ.ಮಂಜುನಾಥ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೇಬರವನ್ನು ಸ್ಥಳದಲ್ಲಿಯೇ ಅರಣ್ಯ ಇಲಾಖೆಯ ನಿಯಮದಂತೆ ಸುಡಲಾಯಿತು.
ಗುರುವಾರ ಜಾನುವಾರುಗಳನ್ನು ಮೇಯಿಸುವ ವೇಳೆಯಲ್ಲಿ ಪೊದೆಯ ಕಡೆಯಿಂದ ವಾಸನೆ ಬರುತ್ತಿದ್ದು ಹೋಗಿ ನೋಡಿದಾಗ ಹುಲಿಗಳು ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸ್ಥಳಕ್ಕೆ ಚಾಮರಾಜನಗರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದು ಸ್ಥಳದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಶ್ವಾನದಳದೊಂದಿಗೆ ಪೊಲೀಸರು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಎರಡು ಹುಲಿಗಳ ಕಳೇಬರ ಇನ್ನೂರು ಮೀಟರ್ ದೂರದಲ್ಲಿ ಪ್ರತ್ಯೇಕವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹುಲಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ವಿಷಪ್ರಾಶನವಾಗಿರುವ ಜಾನುವಾರುಗಳನ್ನು ತಿಂದು ಹುಲಿಗಳು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ.
ಹೆಚ್ಚು ಕಾಣಿಸಿಕೊಳ್ಳುವ ಹುಲಿಗಳು))
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹತ್ತಿರವಾಗಿರುವುದರಿಂದ ಈ ಭಾಗದಲ್ಲಿ ಆಗಾಗ್ಗೆ ಹುಲಿಗಳು, ಚಿರತೆಗಳು ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸುತ್ತಿವೆ. ಜಮೀನುಗಳಿಗೆ ತೆರಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಕುದುರೆ, ಹಸುಗಳನ್ನು ಕೊಂದು ತಿಂದಿತ್ತು. ಅಲ್ಲದೇ ಒಟ್ಟೊಟ್ಟಿಗೆ ಹುಲಿಗಳು ಕಾಣಿಸಿಕೊಂಡು ಭಯ ಮೂಡಿಸುತ್ತವೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.
ಅರಣ್ಯಾಧಿಕಾರಿಗಳಿಂದ ವಿಳಂಬ))
ಹುಲಿಗಳ ಕಳೇಬರ ಗುರುವಾರವೇ ಪತ್ತೆಯಾಗಿದೆ. ಅಲ್ಲದೇ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಗುರುವಾರ ಸಂಜೆಯೇ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಜೆಯಾಗಿದ್ದರಿಂದ ಶುಕ್ರವಾರ ಮರಣೋತ್ತರ ಪರೀಕ್ಷೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ, ಶುಕ್ರವಾರ ಮಧ್ಯಾಹ್ನವಾದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಅಲ್ಲದೇ ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರು ಕೂಡ ಬೇರೆ ಜಿಲ್ಲೆಯಿಂದ ಬರಬೇಕಿದ್ದ ಕಾರಣ ಮರಣೋತ್ತರ ಪರೀಕ್ಷೆ ವಿಳಂಬವಾಯಿತು.
ಹುಲಿಗಳ ಕಳೇಬರ ನೋಡಲು ಜಮಾಯಿಸಿದ ಜನರು))
ಹುಲಿಗಳು ಮೃತಪಟ್ಟಿರುವ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಶುಕ್ರವಾರ ಬೆಳಗ್ಗೆ ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ, ಇಲಾಖೆಯ ಮೇಲಾಧಿಕಾರಿಗಳು, ವೈದ್ಯರು ಬರುವ ತನಕ ಸ್ಥಳಕ್ಕೆ ಯಾರನ್ನು ಬಿಡದ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಜನರು ಕುಳಿತು ಕಾಲ ಕಳೆದರು. ಮಧ್ಯಾಹ್ನವಾದರೂ ಯಾವೊಬ್ಬ ಅಧಿಕಾರಿಗಳು, ವೈದ್ಯರು ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಪ್ರಮೋದ್ ಚಾಮರಾಜನಗರ