ನವದೆಹಲಿ:- ಡಿಸೆಂಬರ್ 30ಕ್ಕೆ ಅಯೋಧ್ಯೆಯಲ್ಲಿ ಮೋದಿ ರೋಡ್ಶೋ ನಡೆಸಲಿದ್ದಾರೆ ಎಂದು ಅಯೋಧ್ಯೆ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ.
ಅಂದು ಪ್ರಧಾನಿ ಅಯೋಧ್ಯೆ ರೈಲು ನಿಲ್ದಾಣ ಮತ್ತು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೇ ಪ್ರಧಾನಿ ತಮ್ಮ ಭೇಟಿ ವೇಳೆ 3,284.60 ಕೋಟಿ ರೂ.ಗೂ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ವಿುಸಲಾದ ದೇವಾಲಯದಲ್ಲಿ ಜ. 22ರಂದು ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಡಿ. 30ರಿಂದ ಜನವರಿ ಕೊನೆಯವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ 100 ಕೋಟಿ ರೂಪಾಯಿಯನ್ನು ಉತ್ತರ ಪ್ರದೇಶ ಸರ್ಕಾರ ತೆಗೆದಿರಿಸಿದೆ. ಇದಕ್ಕೆ ಮುಂಚಿತವಾಗಿ, ನಗರದ ಸೌಂದಯೀಕರಣ, ರಸ್ತೆಗಳ ಅಗಲೀಕರಣ, ಮೂಲಸೌಕರ್ಯಗಳ ನವೀಕರಣ ನಡೆಯುತ್ತಿದೆ. ಸಮಾರಂಭಕ್ಕೆ 3000 ಅತಿ ಗಣ್ಯರು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ ಎಂದರು. 23ರಿಂದ ರಾಮಲಲ್ಲಾ ದರ್ಶನ: ಅಂದಾಜಿನ ಪ್ರಕಾರ ಜ. 22ರ ನಂತರ 50ರಿಂದ 55 ಸಾವಿರ ಜನರು ಪ್ರತಿ ದಿನ ಅಯೋಧ್ಯೆಗೆ ಬರಬಹುದು. 23ರಿಂದ ಸಾರ್ವಜನಿಕರಿಗೆ ರಾಮಲಲ್ಲಾ ದರ್ಶನ ಸಿಗಲಿದೆ ಎಂದು ವಿವರಿಸಿದರು.