ಬೆಂಗಳೂರು:- ಅರಣ್ಯಭೂಮಿಯಲ್ಲಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಅಲ್ಲದೆ, ಪ್ರಕರಣದಲ್ಲಿ ವಿವಾದಿತ ಜಮೀನನ್ನು 1998-99ನೇ ಸಾಲಿನಲ್ಲೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಈ ಜಾಗದಲ್ಲಿ ಅರಣ್ಯ ಇಲಾಖೆಯು ನಡು ತೋಪು ಬೆಳೆಸಿದೆ. ಹಾಗಾಗಿ, ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಸಕ್ರಮಗೊಳಿಸುವ ಪ್ರಶ್ನೆಯೇ ಇಲ್ಲ. 200 ಎಕರೆಯನ್ನು ಅರಣ್ಯ ಇಲಾಖೆಗೆ ನೀಡಿರುವಾಗ, ತಮ್ಮ ಕಕ್ಷಿದಾರರು ಸಾಗುವಳಿ ಮಾಡುತ್ತಿರುವ 10 ಎಕರೆಯನ್ನಾದರೂ ಸಕ್ರಮಗೊಳಿಸಬೇಕು ಎಂದು ಮೇಲ್ಮನವಿದಾರರ ಪರ ವಕೀಲರು ಕೋರಿದರು.
ವಕೀಲರ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಇಡೀ ಜಾಗವನ್ನೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಆ ಕುರಿತು ದಾಖಲೆಗಳು ನೋಂದಣಿಯಾಗಿವೆ. ಇದು ಅರಣ್ಯ ಜಮೀನು ಎಂಬುದಾಗಿ ಸ್ಪಷ್ಟಪಿಸಿ 1998ರ ನ. 3ರಂದು ಜಿಲ್ಲಾಧಿಕಾರಿ ಆದೇಶ ಸಹ ಹೊರಡಿಸಿದ್ದಾರೆ. ಆ ಜಾಗದಲ್ಲಿ ನಡುತೋಪ ಎಂಬುದಾಗಿ ಘೋಷಿಸಿ, ಅರಣ್ಯ ಇಲಾಖೆಯು ಅಕೇಶಿಯಾ ಮತ್ತು ನೀಲಿಗಿರಿ ಮರಗಳನ್ನು ಬೆಳೆಸಿದೆ. ಒಮ್ಮೆ ಯಾವುದೇ ಜಾಗ ಅರಣ್ಯ ಇಲಾಖೆಗೆ ವರ್ಗಾವಣೆಯಾದ ನಂತರ, ಅದನ್ನು ಮತ್ತೆ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸುವ ಅಥವಾ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.