ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ವಂಚನೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕಮಲಾನಗರದಲ್ಲಿರುವ ಸುರೇಶ್ ಎಂಬ ವ್ಯಕ್ತಿ ವಂಚನೆಗೆ ಒಳಗಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಹರ್ಬಲ್ ಲೈಫ್ ಕಂಪನಿಯ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಆರೋಪಿಗಳು ವಂಚನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮೊದಲು ಗಿಫ್ಟ್ ಕಾರ್ಡ್ ಕಳುಹಿಸಿ ಟಾಟಾ ಸಫಾರಿ ಕಾರ್ ಗೆದ್ದಿರುವುದಾಗಿ ಆರೋಪಿಗಳು ಮಾಹಿತಿ ನೀಡುತ್ತಿದ್ದರು. ನಂತರ ಗಿಫ್ಟ್ ಟ್ಯಾಕ್ಸ್ ಕಟ್ಟಬೇಕು ಎಂದು ಇನ್ ಕಮ್ ಟ್ಯಾಕ್ಸ್ ಲೆಟರ್ ಹೆಡ್ ನಲ್ಲಿ ನೋಟಿಸ್ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದರು. ಅದರಂತೆ ಸುರೇಶ್ ಎಂಬ ವ್ಯಕ್ತಿಯಿಂದ ಮೊದಲು 8 ಸಾವಿರ, 15 ಸಾವಿರ ಹೀಗೆ ಹಂತ ಹಂತವಾಗಿ 85 ಸಾವಿರ ರೂಪಾಯಿ ವಂಚನೆ ಮಾಡಿದ್ದಾರೆ. ಹಾಗೂ ಆ ಹಣವನ್ನು ಬೇರೆ ಬೇರೆ ಅಕೌಂಟ್ ನಂಬರ್ ಗಳಿಗೆ ಹಾಕಿಸಿಕೊಂಡು ಆರೋಪಿಗಳು ವಂಚನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ ಈ ಸಂಬಂಧ ಹಣ ಕಳೆದುಕೊಂಡ ಸಂತ್ರಸ್ತ ಪಶ್ಚಿಮ ವಿಭಾಗದ ಸಿಎನ್ಇ ಠಾಣೆಯಲ್ಲಿ ದೂರು ನೀಡಿದ್ದು, ಇನ್ನೂ ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

