ಕೋಲಾರ: ಕೆಜಿಎಫ್ ಬೆಸ್ಕಾಂ ವ್ಯಾಪ್ತಿಯಲ್ಲಿ 2015 ರಿಂದ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ರೈತಸಂಘದಿಂದ ಕೋಳಿಗಳನ್ನು ಹರಾಜು ಹಾಕುವ ಮುಖಾಂತರ ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರ ಮೂಲಕ ಇಂಧನ ಸಚಿವರಿಗೆ ಮನವಿ ನೀಡ ಒತ್ತಾಯಿಸಲಾಯಿತು. ಇದೇ ಸಂದರ್ಭದಲ್ಲಿ
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ತೇಲಿಗಿ ಛಾಪಾ ಕಾಗದ ಹಗರಣದಂತೆ ಬೆಸ್ಕಾಂ ಇಲಾಖೆಯಲ್ಲಿ ಟಿಸಿಯಿಂದ ಹಿಡಿದು ಕಂಬದವರೆಗೂ ಇಲಾಖೆಯಲ್ಲಿ ಭ್ರಷ್ಟಾಚಾರವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ. ಇಲಾಖೆ ಕೆಲವು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿರುವುದು ದುರಾದೃಷ್ಟಕರ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೂಲಿ ಹರಸಿಕೊಂಡು ಗುತ್ತಿಗೆ ಆಧಾರದ ಮೇಲೆ ಹಾಗೂ ಖಾಯಂ ಉದ್ಯೋಗದ ಮೇಲೆ ದುಡಿಯುವ ಅಮಾಯಕರನ್ನು ಬಂಡವಾಳವಾಗಿಸಿಕೊಂಡು ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಮೇಲ ತಮ್ಮ ದರ್ಪವನ್ನು ತೋರಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವಲ್ಲ ಎಂದು ಆರೋಪ ಮಾಡಿದರು.
ಎರಡು ಕಂಬ ಬೀಳುವ ಜಾಗದಲ್ಲಿ 10 ಕಂಬಕ್ಕೆ ಕಾಮಗಾರಿಯ ವರ್ಕ್ ಆರ್ಡರ್ ಅನ್ನು ಸಿದ್ಧಪಡಿಸಿ ಉಳಿದ ಕಂಬಗಳ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಹಂಚಿಕೊಳ್ಳುವುದು ಒಂದು ಹಗರಣವಾದರೆ ಮತ್ತೊಂದು ಭಯಾನಕ ಹಗರಣೆವೆಂದರೆ ರಸ್ತೆ, ಲೇಔಟ್ ಮತ್ತಿತರ ಸರ್ಕಾರಿ ಖಾಸಗಿ ಅಭಿವೃದ್ಧಿ ಕಾಮಗಾರಿಗಳ ಸ್ಥಳದಲ್ಲಿರುವ ಟಿಸಿ ಕಂಬಗಳನ್ನು ರಾತ್ರೋರಾತ್ರಿ ಬೇರೆ ಕಾಮಗಾರಿಯ ಕಡೆ ಬದಲಾವಣೆ ಮಾಡಿ ಹೊಸ ಟಿಸಿ ಕಂಬಗಳ ಖರೀದಿ ಮಾಡಿದಂತೆ ಬಿಲ್ಗಳನ್ನು ಸೃಷ್ಠಿ ಮಾಡಿ ಕೋಟಿಕೋಟಿ ಹಣ ಲೂಟಿಯಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಹೆಸರಿನ ವಿಭಾಗಗಳಲ್ಲಿ 10-20 ವರ್ಷಗಳ ಹಿಂದೆ ಅಳವಡಿಸಿದ್ದ ಟಿಸಿ ಕಂಬಗಳನ್ನು ರೈತರ ಗಮನಕ್ಕೆ ತಾರದೆ ಗುತ್ತಿಗೆದಾರರ ಜೊತೆ ಒಳ ಒಪ್ಪಂದ ಮಾಡಿಕೊಂಡು ಆ ಟಿಸಿ, ಕಂಬಗಳನ್ನು ಪ್ರಭಾವಿ ರಾಜಕಾರಣಿಗಳ ಲೇಔಟ್, ವಾಣಿಜ್ಯ ಮಳಿಗೆಗಳಿಗೆ ಬದಲಾವಣೆ ಮಾಡಿ ಕೋಟಿಕೋಟಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರು ನೀಡಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಈಗ ಆಧುನಿಕವಾಗಿ ಬಂದಿರುವ ಒಂದೇ ವೈಯರ್ ನ ಸಂಪರ್ಕ ಹೆಸರಿನಲ್ಲಿ ಕಂಬಗಳಲ್ಲಿದ್ದ ಹಳೆಯ ವೈಯರ್ ಗಳನ್ನು ಗುಜರಿ ಲೆಕ್ಕದಲ್ಲಿ ಮಾರಾಟ ಮಾಡುವ ದಂಧೆಯೂ ನಡೆಯುತ್ತಿದೆ. ಇದಕ್ಕೆ ಹಿರಿಯ ಅಧಿಕಾರಿಗಳ ಸಹಾಯದಿಂದ ನಡೆಯುತ್ತಿದೆ. ಹಾಗೂ ಟಿಸಿ ಸುಟ್ಟರೆ ಹಾಗೂ ಹಳೆಯ ಟಿಸಿಗೆ ಆಯಿಲ್ ಬದಲಾವಣೆ ಮಾಡುವ ದಂಧೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಹಳೆಯ ಟಿಸಿಗಳಿಗೆ ಹೊಸ ರೂಪ ಕೊಟ್ಟು, ಬಣ್ಣ ಬಳಿದು ಲಕ್ಷಾಂತರ ರೂಪಾಯಿ ಬೆಲೆಗೆ ಸಾವಿರಾರು ಟಿಸಿಗಳನ್ನು ಮಾರಾಟ ಮಾಡಿ ಕೋಟಿಕೋಟಿ ಹಣವನ್ನು ಲೂಟಿ ಮಾಡಿರುವುದು ಇಲಾಖೆಯ ಭ್ರಷ್ಟಾಚಾರತೆಯ 2ನೇ ಮುಖವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದರೆ ಸುಳ್ಳು ಕೇಸುಗಳನ್ನು ದಾಖಲು ಮಾಡುವ ಜೊತೆಗೆ ಹೋರಾಟಗಾರರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನಗಳು ಇಲಾಖೆಯಲ್ಲಿ ನಡೆಸುವ ಮುಖಾಂತರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮುಂದಾಗುತ್ತಿರುವುದು ಇಲಾಖೆಯ ಲಂಚಬಾಕತನಕ್ಕೆ ಉದಾಹರಣೆಯಾಗಿದೆ.
ಕೈಗಾರಿಕೆ, ಗಣಿಗಾರಿಕೆ ನಡೆಸುತ್ತಿರುವ ಪ್ರದೇಶಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ರಾಜಾರೋಷವಾಗಿ ಬೆಸ್ಕಾಂ ಅಧಿಕಾರಿಗಳು ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಕೋಟಿಕೋಟಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ದಂಧೆಯೂ ನಡೆಯುತ್ತಿದೆ. ಬೆಸ್ಕಾಂ ಅಧಿಕಾರಿಗಳ ನಡೆ ಹೇಗೆ ಎಂದರೆ ಅಮಾಯಕ ರೈತರಿಗೆ ಒಂದು ನ್ಯಾಯ, ಬಲಾಢ್ಯರಿಗೆ ಒಂದು ನ್ಯಾಯವಾಗಿದೆ ಎಂದು ಆರೋಪ ಮಾಡಿದರು.
ಮಾನ್ಯರು ಇಲಾಖೆಯಲ್ಲಿ 2015 ರಿಂದ ನಡೆದಿರುವ ಹಗರಣವನ್ನು ಸಿಬಿಐಗೆ ಒಪ್ಪಿಸಿ ಅಕ್ರಮದಲ್ಲಿ ಭಾಗಿಯಾಗಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಇಲಾಖೆಯನ್ನು ಉಳಿಸಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯಪಾಲಕ ಅಭಿಯಂತರರಾದ ರಮೇಶ್ ಅವರು, ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗಿವೆ. ಇದರ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ರಾಮಸಾಗರ ವೇಣು, ಸುರೇಶ್ಬಾಬು, ಸುಪ್ರೀಂ ಚಲ, ಫಾರೂಖ್ ಪಾಷ, ಪಾರಂಡಹಳ್ಳಿ ಮಂಜುನಾಥ್, ನಾಗಭೂಷಣ್, ಗಿರೀಶ್, ತಿಮ್ಮಣ್ಣ, ನರಸಿಂಹಯ್ಯ, ಪೆಮ್ಮದೊಡ್ಡಿ ಯಲ್ಲಣ್ಣ, ಹರೀಶ್, ಕದಿರಿನತ್ತ ಅಪ್ಪೋಜಿರಾವ್, ಗೋವಿಂದಪ್ಪ, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಮುನಿರಾಜು, ವಿಶ್ವ ಮುಂತಾದವರಿದ್ದರು.