ವಾಷಿಂಗ್ಟನ್: ವೆರಿಫೈಡ್ ಟ್ವಿಟ್ಟರ್ ಖಾತೆಗಳನ್ನು (Verified Account) ಹೊಂದಿರುವ ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ಜಾಹೀರಾತು ಆದಾಯದಲ್ಲಿ ಹಣ ನೀಡುವುದಾಗಿ ಟ್ವಿಟ್ಟರ್ ಸಂಸ್ಥೆ ಘೋಷಣೆ ಮಾಡಿದೆ. ತಮ್ಮ ರಿಪ್ಲೈಗಳಲ್ಲಿ ಪ್ರದರ್ಶಿಸಲಾದ ಜಾಹೀರಾತು ಆದಾಯದಲ್ಲಿ ಕಟೆಂಟ್ ಕ್ರಿಯೇಟರ್ಸ್ಗಳು (Content Creators) ಪಾಲನ್ನು ಪಡೆದುಕೊಳ್ಳಲಿದ್ದಾರೆ. ಈ ಸೌಲಭ್ಯಕ್ಕೆ ಅರ್ಹರಾಗಲು ಅವರು ಕಳೆದ 3 ತಿಂಗಳಲ್ಲಿ ತಮ್ಮ ಪೋಸ್ಟ್ಗಳಿಗೆ ಕನಿಷ್ಠ 50 ಲಕ್ಷ ಇಂಪ್ರೆಶನ್ಗಳನ್ನ ಒಳಗೊಂಡಿರಬೇಕು. ಜೊತೆಗೆ ಸ್ಟ್ರೈಪ್ ಪೇಮೆಂಟ್ ಅಕೌಂಟ್ ಅನ್ನು ಸಹ ಹೊಂದಿರಬೇಕಾಗುತ್ತದೆ ಎಂದು ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.
ಮಾರ್ಕ್ ಜುಕರ್ಬರ್ಗ್ ಒಡೆತನದ ಮೆಟಾ ಸಂಸ್ಥೆ ಟ್ವಿಟ್ಟರ್ಗೆ ಸೆಡ್ಡು ಹೊಡೆಯಲು ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ಟ್ವಿಟ್ಟರ್ ಹೆಚ್ಚು ಕಂಟೆಂಟ್ ಕ್ರಿಯೇಟರ್ಸ್ಗಳನ್ನ ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿದ್ದು, ಈ ಆಫರ್ ನೀಡಿದೆ. ಈ ನಡುವೆ ವಿಶ್ವದ ಶ್ರೀಮಂತ ಉದ್ಯಮಿಯಾಗಿರುವ ಎಲೋನ್ ಮಸ್ಕ್ (Elon Musk) ಹೊಸ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಅನ್ನು ಪ್ರಾರಂಭಿಸಿದ್ದಾರೆ.
ಇತ್ತೀಚೆಗೆ ಎಐ (AI) ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ (OpenAI) ಚಾಟ್ ಜಿಪಿಟಿಗೆ (ChatGPT) ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿದ್ದಾರೆ. ಈಗಾಗಲೇ ಎಲೆಕ್ಟ್ರಿಕ್ ಕಾರು ತರಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಉಡಾವಣಾ ಕಂಪನಿ ಸ್ಪೇಸ್ಎಕ್ಸ್ನ ಸಿಇಒ ಮಾತ್ರವಲ್ಲದೇ ಟ್ವಿಟ್ಟರ್ನ ಮಾಲೀಕನಾಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇನ್ನು ಕೇವಲ 5-6 ವರ್ಷಗಳಲ್ಲಿ ಬರಲಿದೆ ಎಂದು ಮಸ್ಕ್ ಭವಿಷ್ಯ ನುಡಿದಿದ್ದಾರೆ.