ಬೆಂಗಳೂರು: ಕ್ಷೇತ್ರ ಮರುವಿಂಗಡಣೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ ಅವರು, ಮರುವಿಂಗಡಣೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಅಥವಾ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎಂಬ ಮುಖ್ಯ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ ಎಂದರು.
ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಿದೆ. ಇತ್ತೀಚಿನ ಜನಗಣತಿಯನ್ನು (2021 ಇಲ್ಲವೇ 2031) ಮಾತ್ರ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆದರೆ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 26ಕ್ಕೆ ಇಳಿಯುವ ಸಾಧ್ಯತೆ ಇದೆ.
ಇದೇ ರೀತಿ ಆಂಧ್ರಪ್ರದೇಶದಲ್ಲಿ 42 ರಿಂದ 34, ಕೇರಳದಲ್ಲಿ ಸಂಖ್ಯೆ 20 ರಿಂದ 12ಕ್ಕೆ, ತಮಿಳುನಾಡಿನಲ್ಲಿ 39 ರಿಂದ 31ಕ್ಕೆ ಇಳಿಯಲಿದೆ. ಇದೇ ವೇಳೆ ಉತ್ತರಪ್ರದೇಶದಲ್ಲಿ 80 ರಿಂದ 91, ಬಿಹಾರದಲ್ಲಿ 40ರಿಂದ 50, ಮಧ್ಯಪ್ರದೇಶದಲ್ಲಿ 29ರಿಂದ 33ಕ್ಕೆ ಏರಿಕೆಯಾಗಲಿದೆ. ಇದನ್ನು ಅನ್ಯಾಯ ಎನ್ನದೆ ನ್ಯಾಯ ಎನ್ನಲು ಸಾಧ್ಯವೇ? ಈ ಅನ್ಯಾಯವನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಗೆ ತೋರುತ್ತಿರುವ ಅತ್ಯುತ್ಸಾಹವನ್ನು ನೋಡಿದರೆ ತಮ್ಮ ಪಕ್ಷದ ಕೀರ್ತಿಪತಾಕೆ ಹಾರಿಸುವುದಕ್ಕೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣದ ರಾಜ್ಯಗಳ ಜನತೆಗೆ ಶಿಕ್ಷಿಸುವ ದುರುದ್ದೇಶ ಇರುವಂತೆ ಕಾಣಿಸುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನೋಡಿಯೂ ರಾಜ್ಯದಿಂದ ಲೋಕಸಭೆಗೆ ಆರಿಸಿಹೋಗಿರುವ ಹದಿನೇಳು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸದಸ್ಯರು ಜೀತದಾಳುಗಳಂತೆ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ.
ರಾಜ್ಯದ ಬಿಜೆಪಿ ನಾಯಕರು ಪರಸ್ಪರ ಕೆಸರೆರೆಚಾಟ ನಡೆಸುತ್ತಾ ಬೀದಿ ಜಗಳದಲ್ಲಿ ಮಗ್ನರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜಾತಿ-ಧರ್ಮ ಪಕ್ಷ-ಪಂಥಗಳ ಭೇದವನ್ನು ಮರೆತು ಕನ್ನಡಿಗರೆಲ್ಲರೂ ಒಂದಾಗಿ ಒಂದೇ ದನಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾಗಿದೆ.
ಈ ಅನ್ಯಾಯದ ವಿರುದ್ಧ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೀಡಾಗಿರುವ ಎಲ್ಲ ರಾಜ್ಯಗಳ ಜೊತೆಗೂಡಿ ಸಂಘಟಿತವಾದ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.