ಬೆಂಗಳೂರು:- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜನರ ಸಮಸ್ಯೆ ಆಲಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಚಿಕ್ಕಬಾಣಾವರ ಕೆರೆ ಯಾವ ಸ್ಥಿತಿಯಲ್ಲಿದೆ ಎಂದು ನೋಡಿದ್ದೇನೆ. ಉಪಮುಖ್ಯಮಂತ್ರಿ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೆಂಗಳೂರು ನೋಡುತ್ತಿರುತ್ತಾರೆ. ರಸ್ತೆ ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ಹೂಳು ತುಂಬಿದೆ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಯಾವುದೆ ಅನುದಾನ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ನಗರೋತ್ಥಾನ ಅಭಿವೃದ್ಧಿ ಅಡಿಯಲ್ಲಿ 110 ಹಳ್ಳಿಗೆ ಬಿಡುಗಡೆ ಆಗಿದ್ದ ಹಣ ವಾಪಸ್ ಪಡೆದಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೆ ಅತಿ ಹೆಚ್ಚು ತೆರಿಗೆ ನೀಡುತ್ತದೆ. ಆ ಪ್ರದೇಶವನ್ನೆ ಸರಕಾರ ಕಡೆಗಣನೆ ಮಾಡಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ಸರಬರಾಜು ಸರಿಯಾಗಿ ನಡೆದಿಲ್ಲ. ಒಳಚರಂಡಿ ಸಂಪೂರ್ಣ ಹಾಳಾಗಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಚಿಕ್ಕಬಾಣಾವರ ಕೆರೆ ಒಳಚರಂಡಿ, ತಾಜ್ಯದಿಂದ ತುಂಬಿದೆ. ಇದರ ಪುನರುಜ್ಜೀವನ ಮಾಡುವ ನಿಟ್ಟಿಗೆ ಮುಂದಾಗಬೇಕಿದೆ. ಕೆಆರ್ಐಡಿಎಲ್ ಮೂಲಕ ಅಭಿವೃದ್ದಿ ಮಾಡಬೇಕಿದೆ. ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡಲು ಸಾಧ್ಯವಿಲ್ಲದ್ದಷ್ಟು ಈ ಸರಕಾರ ದಿವಾಳಿ ಆಗಿದೆಯೆ ಎಂದು ಅವರು ಪ್ರಶ್ನಿಸಿದರು.