ಬೆಂಗಳೂರು: ಮೇಕೆದಾಟು ಯೋಜನೆಯ ನೆಪದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯು ಕೋವಿಡ್ ಕಾಲ ಘಟ್ಟದ ಅತ್ಯಂತ ಹೇಯ, ಅಮಾನುಷ ಮತ್ತು ಜೀವ ವಿರೋಧಿ ಪ್ರತಿಭಟನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಜೆಡಿಎಸ್ ನಾಯಕ ಟಿ.ಎ. ಶರವಣ ಆಕ್ರೋಶ ವ್ಯಕ್ತಪಡಿದ್ದಾರೆ.
ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಪ್ರತಿ ಭಟನೆ ನಡೆಸುವುದು ಅವರವರ ಹಕ್ಕು. ಸಂವಿಧಾನ ಈ ಹಕ್ಕು ನೀಡಿದೆ. ಆದರೆ ಇದೇ ಸಂವಿಧಾನ ಕೆಲವು ಕರ್ತವ್ಯ ಗಳನ್ನು ವಿಧಿಸಿದೆ. ಕೋವಿಡ್ ಮಹಾಮಾರಿ ಮಿತಿ ಮೀರಿದ ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಮರೆತಿದ್ದು, ಜನರ ಜೀವವನ್ನು ಪಣಕ್ಕಿಟ್ಟು ಪಾದಯಾತ್ರೆಯ ನಾಟಕವಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಕೊವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರನ್ನು ಒಂದೆಡೆ ಸೇರಿಸುವ ಮೂಲಕ, ನೀತಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಕಾಂಗ್ರೆಸ್ ಪಕ್ಷ ಜನ ವಿರೋಧಿ, ಬೇಜವಾಬ್ದಾರಿ ಪಕ್ಷ ಎಂಬುದನ್ನು ತೋರಿಸಿದೆ ಎಂದು ಶರವಣ ಕಿಡಿ ಕಾರಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರ ಕೋವಿಡ್ ಗಂಭೀರ ಪರಿಸ್ಥಿತಿಯ ನಡುವೆ ಇಂಥ ಪಾದಯಾತ್ರೆ ನಡೆಸಲು ಅವಕಾಶ ನೀಡುವ ಮೂಲಕ ತಾನೊಂದು ದುರ್ಬಲ, ಅಸಹಾಯಕ ಸರಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಹಾಡು ಹಗಲೇ, ಸಾವಿರಾರು ಪೊಲೀಸರ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ ಆದರೂ ಕಣ್ಣು ಮುಚ್ಚಿ ಮೌನಕ್ಕೆ ಶರಣಾದ ಆಡಳಿತ ಸರ್ಕಾರ ಪುಕ್ಕಲು ಸರಕಾರವೇ ಎನ್ನುವ ಗುಮಾನಿ ಬರುತ್ತದೆ ಎಂದು ಗೇಲಿ ಮಾಡಿದ್ದಾರೆ.
ರಸ್ತೆಯಲ್ಲಿ ಹೋಗುವ ಬಡವರು, ಕೂಲಿ ಕಾರ್ಮಿಕರು ಮಾಸ್ಕ್ ಹಾಕಲಿಲ್ಲ ಎಂದರೆ ಮಾನವೀಯತೆ ಇಲ್ಲದೆ ನೂರಾರು ರೂಪಾಯಿ ಸುಲಿಗೆ ಮಾಡುವ ಪೊಲೀಸರು ಇಲ್ಲಿ ಮಾತ್ರ ಬಾಯಿ ಮುಚ್ಚಿ ಮೂಕ ಪ್ರೇಕ್ಷಕರಾಗಿರುವುದು ಆಶ್ಚರ್ಯಕರ.
ಈ ಪಾದಯಾತ್ರೆ ಕೋವಿಡ್ *ಸೂಪರ್ ಸ್ಪ್ರೆಡರ್ ಯಾತ್ರೆ ಯಾಗುವುದು ನಿಶ್ಚಿತವಾಗಿದ್ದು, ಬರುವ ದಿನಗಳಲ್ಲಿ ಸಂಭವಿಸಲಿರುವ ಕೋವಿಡ್ ದುರಂತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ಕಾಂಗ್ರೆಸ್ ನ ಬೇಜವಾಬ್ದಾರಿ ತನವೇ ಕಾರಣ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಜನರ ಜೀವದ ಜೊತೆ ಚೆಲ್ಲಾಟ ಮಾಡುವ ರಾಜಕೀಯ ವನ್ನು ತಕ್ಷಣ ನಿಲ್ಲಿಸಬೇಕು ಎಂದು ಅಗ್ರಹಪಡಿಸಿದ್ದಾರೆ.