ವಾರಂಗಲ್: ” ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಜನರು ತಮ್ಮ ಅಗಾಧ ಬೆಂಬಲದ ಮೂಲಕ ಕಾಂಗ್ರೆಸ್ ಬಿರುಗಾಳಿಯನ್ನು ಎಬ್ಬಿಸಲಿದ್ದಾರೆ. ಬಿಆರ್ಎಸ್ ಹೀನಾಯವಾಗಿ ಸೋಲು ಕಾಣಲಿದೆ. ಬದಲಿಗೆ ಕಾಂಗ್ರೆಸ್ ತನ್ನ ಬದ್ಧತೆಯಾಗಿರುವ ಒಬಿಸಿ ಸಮುದಾಯದ ಮೀಸಲು ಪ್ರಮಾಣವನ್ನು ಪಂಚಾಯಿತಿಗಳಲ್ಲಿ ಶೇ 23 ನಿಂದ ಶೇ 42ಕ್ಕೆ ಏರಿಕೆ ಮಾಡಲಿದೆ,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಅವರು ಶುಕ್ರವಾರ ತೆಲಂಗಾಣದ ಪಿನಾಪಾಕ, ನರಸಂಪೇಟ್ನಲ್ಲಿ ಚುನಾವಣಾ ಪ್ರಚಾರ ರಾಲಿಗಳನ್ನು ನಡೆಸಿದರು. ಪಂಚಾಯಿತಿ ಮಟ್ಟದಲ್ಲಿ ಮೀಸಲು ಪ್ರಮಾಣ ಹೆಚ್ಚಳದಿಂದ ತೆಲಂಗಾಣದಲ್ಲಿ 24 ಸಾವಿರ ಹೊಸ ಪಂಚಾಯಿತಿ ನಾಯಕರ ಉದಯವಾಗಲಿದೆ. ಮುಖ್ಯವಾಗಿ ಆದಿವಾಸಿಗರಿಗೆ, ದಲಿತರಿಗೆ ರಾಜಕೀಯದಲ್ಲಿ ಸ್ಥಾನಮಾನ ಸಿಗಲಿದೆ. ರಾಜ್ಯದ ಆಡಳಿತಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತೆಲಂಗಾಣ ರಚನೆಯಾದಾಗ ಹಿದುಳಿದ ವರ್ಗಗಳು, ದಲಿತರು ಮತ್ತು ಆದಿವಾಸಿಗಳು ರಾಜಕಾರಣದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನುವ ಆಶಯ ಕಾಂಗ್ರೆಸ್ಗೆ ಇತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೊದಲು ಮಾಡುವ ಕೆಲಸವೇ ಜಾತಿ ಗಣತಿ ಎಂದು ತಿಳಿಸಿದರು. “ಈ ದೇಶದಲ್ಲಿ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಎಷ್ಟಿದ್ದಾರೆ ಎಂದು ತಿಳಿಯಲು ನಾವು ಬಯಸಿದ್ದೇವೆ. ಹಿಂದುಳಿದವರ ಜನಸಂಖ್ಯೆ ಶೇ 50ರಷ್ಟಿದ್ದರೆ, ಅವರ ಪಾಲ್ಗೊಳ್ಳುವಿಕೆಯೂ ಶೇ 50ರಷ್ಟು ಇರಬೇಕು ಎಂದು ಹೇಳಿದರು.