ನವದೆಹಲಿ: ದೇಶದಲ್ಲಿ ಕೋವಿಡ್ ಮೂರನೇ ಅಲೆ ವ್ಯಾಪಕವಾಗಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ವಿದೇಶಗಳಿಂದ ಭಾರತಕ್ಕೆ ಪ್ರಯಾಣ ಬೆಳೆಸುವವರಿಗೆ ಒಂದು ವಾರ ಹೋಂ ಕ್ವಾರಂಟೈನ್ ಕಡ್ಡಾಯ. ಅಲ್ಲದೇ ಕ್ವಾರಂಟೈನ್ ಆದ 6ನೇ ದಿನಕ್ಕೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಅತ್ಯಂತ ಅಪಾಯದ ದೇಶಗಳ ಪಟ್ಟಿ 19ಕ್ಕೆ ಏರಿದೆ. ಡಿಸೆಂಬರ್ ತಿಂಗಳಲ್ಲೇ ಈ ಪಟ್ಟಿಗೆ 9 ದೇಶಗಳು ಸೇರಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬಿಗಿ ನಿಯಮಗಳನ್ನು ರೂಪಿಸಲಾಗಿದೆ. ಹೊರದೇಶಗಳಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್ ಆಗಬೇಕು. ಕೊನೆ ದಿನದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಬೇಕು. ಅದರಲ್ಲಿ ಪಾಸಿಟಿವ್ ಬಂದರೆ ಅಂತಹವರನ್ನು ಐಸೊಲೇಷನ್ ಮಾಡಲಾಗುವುದು. ಅವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು ಎಂದು ತಿಳಿಸಿದೆ.

ಸೋಂಕಿತ ಪ್ರಯಾಣಿಕನ ಅಕ್ಕಪಕ್ಕ ಕುಳಿತವರು ಹಾಗೂ ಸಿಬ್ಬಂದಿಯನ್ನು ಸಂಪರ್ಕಿತರು ಎಂದೇ ಪರಿಗಣಿಸಲಾಗುವುದು. ಒಂದು ವೇಳೆ ಪ್ರಯಾಣಿಕರ ವರದಿ ನೆಗೆಟಿವ್ ಬಂದರೆ ಮುಂದಿನ ಒಂದು ವಾರ ತಮ್ಮ ಆರೋಗ್ಯದ ಮೇಲೆ ಸ್ವಯಂ ನಿಗಾ ವಹಿಸಬೇಕು ಎಂದು ನಿಯಮದಲ್ಲಿ ಹೇಳಿದೆ. ತಪಾಸಣೆ ವೇಳೆ ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗುವುದು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಸಂಪರ್ಕಿತರನ್ನು ಗುರುತಿಸಲಾಗುವುದು ಎಂದು ಹೇಳಿದೆ.