ಬೆಂಗಳೂರು: : ಮೆಟ್ರೋಪಾಲಿಟನ್ ಸಿಟಿ, ಹೈಟೆಕ್ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆ ಧಕ್ಕೆ ತಂದು, ಅಟ್ಟಹಾಸಗೈವ ಕ್ರಿಮಿಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಖಾಕಿ ಪಡೆ ಮತ್ತಷ್ಟು ಅಪ್ ಗ್ರೇಡ್ ಆಗಿದೆ. ಮಹಿಳೆಯರು ಮಕ್ಕಳ ಸುರಕ್ಷತೆಗಾಗಿ ದೇಶದಲ್ಲಿ ಮೊದಲ ಬಾರಿಗೆ ಸೇಫ್ ಸಿಟಿ ಯೋಜನೆಯಡಿ ಸುಸಜ್ಜಿತ ಬಹುಮಹಡಿ ಕಮಾಂಡ್ ಸೆಂಟರ್ (Command and Control Centre) ನಿರ್ಮಾಣವಾಗಿದೆ. ಈ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಉದ್ಘಾಟನೆ ಮಾಡಿದರು
ಕಮಾಂಡ್ ಸೆಂಟರ್ ವಿಶೇಷವೇನು ?
ಕಮಾಂಡ್ ಸೆಂಟರ್ನಲ್ಲಿ ಸಿಬ್ಬಂದಿಗಳು ದಿನದ 24 ಗಂಟೆಗಳು ಹದ್ದಿನ ಕಣ್ಣಿಡಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲೆ ಕಿರುಕುಳ, ಅಸಭ್ಯ ವರ್ತನೆ, ಚುಡಾಯಿಸುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಸೇರಿದಂತೆ ಕಾನೂನು ಸುವ್ಯವಸ್ಥೆ ಧಕ್ಕೆಯಾಗುವ ಘಟನೆಗಳು ನಡೆದರೆ ಅತ್ಯಾಧುನಿಕ ಸಿಸಿ ಕ್ಯಾಮರಗಳು ವಿಡಿಯೋ ಸೆರೆಹಿಡಿದು ಕೂಡಲೇ ಆಯಾ ಪೊಲೀಸ್ ಠಾಣೆಗಳ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸಿ ಆರೋಪಿತರನ್ನ ತ್ವರಿತಗತಿಯಲ್ಲಿ ಹಿಡಿಯುವ ಕೆಲಸವಾಗಲಿದೆ. ಪದೇ ಪದೇ ಅಪರಾಧ ಕೃತ್ಯವೆಸಗುವ ಚಾಳಿಯಿರುವ ಸುಮಾರು 30 ಸಾವಿರಕ್ಕೂ ಹೆಚ್ಚು ಆರೋಪಿಗಳ ಭಾವಚಿತ್ರಗಳನ್ನ ಸಾಫ್ಟ್ ವೇರ್ ನಲ್ಲಿ ಮಾಹಿತಿ ಸಂಗ್ರಹಿಸಿ ಜೋಡಿಸಲಾಗಿದೆ. ಒಂದು ವೇಳೆ ಅಪರಾಧವೆಸಗುವುದು ಕಂಡುಬಂದರೆ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಆಯಾ ವ್ಯಕ್ತಿಯನ್ನ ಗುರುತು ಹಿಡಿಯಬಹುದಾಗಿದೆ. ಕಮಾಂಡ್ ಸೆಂಟರ್ ಮಾತ್ರವಲ್ಲದೆ ಆಯಾ ವಿಭಾಗದ 8 ಡಿಸಿಪಿ ಕಚೇರಿಗಳು, ಕಾನೂನು ಸುವ್ಯವಸ್ಥೆಯ ಪೊಲೀಸ್ ಠಾಣೆಗಳಲ್ಲಿ ಕಮಾಂಡ್ ಸೆಂಟರ್ ಫೀಡ್ ನ ನೇರ ಸಂಪರ್ಕವನ್ನ ವೀಕ್ಷಿಸಬಹುದಾಗಿದೆ.
ನಮ್ಮ ಡಯಲ್ 112 ಉನ್ನತೀಕರಣ
ಮಹಿಳೆಯರ ಸುರಕ್ಷತೆಗೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸದ್ಯ 35 ಐಸ್ ಲ್ಯಾಂಡ್ ನಿರ್ಮಿಸಲಾಗಿದ್ದು ಇದರ ಸಂಪರ್ಕವನ್ನ ಕಮಾಂಡ್ ಸೆಂಟರ್ ಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 15 ಸೇಫ್ಟಿ ಐಲ್ಯಾಂಡ್ ಅಳವಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಯಾಧುನಿಕ ಡೇಟಾ ಸೆಂಟರ್ ನಲ್ಲಿ 30 ದಿನಗಳ ನಿರಂತರವಾಗಿ ವಿಡಿಯೋ ಸಂಗ್ರಹಣೆಗೆ ಅವಕಾಶವಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿ ಸಂಬಂಧಿಸಿದಂತೆ ಸುಮಾರು 60 ದಿನಗಳ ಡೇಟಾ ಸಂಗ್ರಹಿಸಬಹುದಾಗಿದೆ. ಅಸ್ಥಿತ್ವದಲ್ಲಿರುವ ನಮ್ಮ ಡಯಲ್ 112 ಉನ್ನತೀಕರಣ, ಸಂಪರ್ಕ ಕೇಂದ್ರದ ನವೀಕರಣ, ಜಿಐಎಸ್ ಮತ್ತು ಸ್ಥಳ ಆಧಾರಿತ ಪತ್ತೆ ವಿವಿಧ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗ ಕಮಾಂಡ್ ಸೆಂಟರ್ ಸಾಕ್ಷಿಯಾಗಲಿದೆ.