ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಡಿ.9ರ ತನಕ ‘ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಳಿಗಾಲ ಆರಂಭವಾದರೂ ಸಹಿತ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷ ಇಲ್ಲ. ಕೆಲವು ದಿನಗಳಿಂದ ಚಳಿಯೂ ಅಲ್ಲದ, ಅಧಿಕ ಬಿಸಿಲು ಬೀಳದೆ ಮತ್ತು ನಿರೀಕ್ಷಿತ ಮಳೆ ಆಗದೇ ಇರುವ ವಾತಾವರಣ ಉಂಟಾಗಿತ್ತು. ಸದ್ಯ ಅದೆಲ್ಲವು ಈಗ ಬದಲಾಗಿದ್ದು, ಚಳಿಯ ವಾತಾವರಣ ಏರಿಕೆ ಆಗಲಿದೆ.
ಬಂಗಾಳಕೊಲ್ಲಿ-ಅಂಡಮಾನ್ ಸಮುದ್ರ ಭಾಗದಲ್ಲಿ ಉಂಟಾಗಿರುವ ಮೈಚಾಂಗ್ ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನ ವಾತಾವರಣ ಬದಲಾಗಿದೆ. ಮೈಚಾಂಗ್ ಇಂದು ತೀವ್ರ ಸ್ವರೂಪ ಪಡೆದುಕೊಂಡು ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ.
ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ಮಂಗಳವಾರದವರೆಗೆ ಇದೇ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಸೋನೆ ಮಳೆ ಬರಲಿದೆ. ನಂತರದ ಡಿಸೆಂಬರ್ 10ರವರೆಗೆ ಮತ್ತಷ್ಟು ಚಳಿಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ನಗರದಲ್ಲಿ ಡಿಸೆಂಬರ್ 07ರವರೆಗೆ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ನಂತರ ಡಿಸೆಂಬರ್ 10ರವರೆಗೆ 17ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಲಿದೆ. ಈ ವೇಳೆ ಗರಿಷ್ಠ ತಾಪಮಾನ 28-29ರಷ್ಟು ಇರಲಿದೆ ಎಂದು ತಿಳಿಸಿದೆ.
ಶನಿವಾರದಿಂದ ನಗರದಲ್ಲಿ ಚಳಿ ಹೆಚ್ಚಾಗುತ್ತಲೇ ಇದೆ. ಎಲ್ಲಿಯೂ ಸಹ ಮಳೆ ಬಿದ್ದ ಬಗ್ಗೆ ವರದಿ ಆಗಿಲ್ಲ. ಅಲ್ಲಲ್ಲಿ ಸೋನೆ ಮಳೆ, ಮಬ್ಬು ವಾತಾವರಣ ಕಂಡು ಬಂದಿದೆ. ನಾಗರಿಕರು ಬೆಚ್ಚಗಿನ ಧಿರಿಸಿನ ಮೊರೆ ಹೋಗಿದ್ದಾರೆ. ಇನ್ನೂ ಕೆಲವು ದಿನ ವಾತಾವರಣ ಹೀಗೆ ಇರಲಿದೆ.