ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿದ ರೈತರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇಂಧನ ಇಲಾಖೆಯ ಪ್ರಗತಿಪರಿಶೀಲನೆ ಸಭೆ ನಡೆಸಿದ ಬಳಿಕ ರೈತರಿಗೆ ಅನುಕೂಲವಾಗುವಂತೆ 7 ಗಂಟೆ 3ಫೇಸ್ ವಿದ್ಯುತ್ ನೀಡೋ ಮಹತ್ವದ ಆದೇಶವನ್ನ ಹೊರಡಿಸಿದ್ದಾರೆ ಸಿದ್ದರಾಮಯ್ಯ. ಮಧ್ಯರಾತ್ರಿಯ ಕತ್ತಲಲ್ಲಿ ಜೀವ ಭಯದಿಂದ ನೀರು ಹಾಯಿಸ್ತಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡುವಂತಾಗಿದೆ….
ಕರ್ನಾಟಕದಲ್ಲಿ ಮಳೆಯ ಕೊರತೆ ಹಿನ್ನೆಲೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ,ಮಳೆಯಿಲ್ಲದೆ ತೀವ್ರ ಬರಗಾಲ ಎದುರಾಗಿದ್ದು ಬಿತ್ತಿದ ಬೆಳೆಗಳೆಲ್ಲಾ ಒಣಗಿಹೋಗಿವೆ. ಇತ್ತ ಬೋರ್ ವೆಲ್ ಗಳನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿದ್ದಾರೆ, ರಾತ್ರಿವೇಳೆ ಕಣ್ಣಾಮುಚ್ಚಾಲೆಯಂತೆ 3-5 ಗಂಟೆ ಕೊಡೋ ಕರೆಂಟ್ ನೆಚ್ಚಿಕೊಂಡು ಅನ್ನದಾತ ಜೀವಕ್ಕೆ ಕುತ್ತು ತಂದುಕೊಳ್ತಿದ್ದಾನೆ. ಸರ್ಕಾರದ ವಿರುದ್ಧ ರೈತರು ಕೆಂಡ ಕಾರ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಇಂದು ಇಂಧನ ಇಲಾಖೆಯ ಸಭೆ ನಡೆಸಿ ರೈತರಿಗೆ ಬಂಫರ್ ಗಿಫ್ಟ್ ಕೊಟ್ಟಿದ್ದಾರೆ….
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ನಡೆದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ರೈತರಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ರೈತರಿಗೆ 7 ಗಂಟೆ 3 ಫೇಸ್ ಕರೆಂಟ್ ನೀಡಲು ತೀರ್ಮಾನ ಮಾಡಿದ್ದಾರೆ. ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಹಿಂದೆ ರೈತರಿಗೆ 5 ತಾಸು ಕರೆಂಟ್ ನೀಡ್ತಿದ್ವಿ. ಆದ್ರೆ ಯಾದಗಿರಿ, ಬಳ್ಳಾರಿ, ಕೊಪ್ಪಳ ಭಾಗದ ರೈತರು ಭತ್ತ ಮತ್ತು ಕಬ್ಬು ಬೆಳೆಯುತ್ತಿದ್ದೇವೆ ಹೆಚ್ಚು ಸಮಯ ತ್ರಿಪೇಸ್ ಬೇಕು ಅಂತ ಹೇಳಿದ್ರು. ಅದರಿಂದ ಆ ಭಾಗದ ರೈತರಿಗೆ 7 ಗಂಟೆ ಕರೆಂಟ್ ನೀಡ್ತಿದ್ವಿ. ಆದ್ರೆ ಇದು ಇಂಧನ ಇಲಾಖೆ ಸಭೆ ಮಾಡಿ ರಾಜ್ಯದ ಎಲ್ಲ ಜನರಿಗೆ 7 ಗಂಟೆ ವಿದ್ಯುತ್ ನೀಡಲು ತೀರ್ಮಾನಕ್ಕೆ ಬಂದಿದ್ದೇವೆ. ಸೆಕ್ಷನ್ 11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್ ನೀಡದಂತೆ ಆದೇಶ ಹೊರಡಿಸಿದ್ದು ಅದರಿಂದ ವಿದ್ಯುತ್ ವಿತರಣೆ ಸಹಜ ಸ್ಥಿತಿಗೆ ಬಂದಿದೆ ಅಂತಾ ಮಾಹಿತಿ ನೀಡಿದ್ರು ಸಿಎಂ…..
ರಾಜ್ಯದಲ್ಲಿ ವಿದ್ಯುತ್ ಕೊರತೆಯಿದ್ದು ಇದನ್ನ ಹೇಗೆ ಸರ್ಕಾರ ಬರಿಸಲಿದೆ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳಿದ್ದು, ರಾಜ್ಯದಲ್ಲಿ ಥರ್ಮಲ್, ಜಲವಿದ್ಯುತ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಥರ್ಮಲ್ ಘಟಕವು 1000 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ, ಸುಮಾರು 2,400 ರಿಂದ 3,200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಕಬ್ಬು ಅರೆಯುವುದು ಪ್ರಾರಂಭವಾಗಿ ಕೋ-ಜನರೇಷನ್ ಆಗಿರುವುದರಿಂದ 450 ಮೆ.ವ್ಯಾಟ್ ಉತ್ಪಾದನೆಯಾಗಿದೆ. ಕೂಡ್ಲಗಿಯಲ್ಲಿ 150 ಮೆ.ವ್ಯಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ. ಹಾಗೂ ಖರೀದಿ ಮಾಡುತ್ತಿರುವುದರಿಂದ ಹೆಚ್ಚು ವಿದ್ಯುತ್ ದೊರೆಯಲಿದೆ. ಹಾಗಾಗಿ ಇಂದಿನಿಂದ 7 ತಾಸು ವಿದ್ಯುತನ್ನು ಪಂಪ್ಸೆಟ್ಗಳಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ. ಹಾಗೇ ಕೈಗಾರಿಕೆಗಳಿಗೆ, ಗೃಹಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ, ಪಂಪ್ಸೆಟ್ಗಳಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಸರ್ಕಾರವೇ ನೀಡಿದೆ. 13,100 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಒದಗಿಸಲಾಗಿದ್ದು. ಒಟ್ಟು 7 ಗಂಟೆ ವಿದ್ಯುತ್ ನೀಡಲು 1,500 ಕೋಟಿ ವೆಚ್ಚವಾಗಲಿದ್ದು ಸರ್ಕಾರವೇ ಇದನ್ನ ಬರಿಸಲಿದೆ ಅಂತ ಸಿಎಂ ಪರೋಕ್ಷವಾಗಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ರು
ಒಟ್ನಲ್ಲಿ ತೀವ್ರ ಬರಗಾಲದಿಂದ ಕಂಗೆಟ್ಟಿರುವ ಅನ್ನದಾತ ಪಂಪ್ ಸೆಟ್ ನೆಚ್ಚಿಕೊಂಡು ಬಿತ್ತನೆ ಮಾಡಿ ಕರೆಂಟ್ ಇಲ್ಲದೆ ತಲೆಮೇಲೆ ಕೈಹೊತ್ತು ಕೂತಿದ್ದ. ಇದೀಗ ಸಂಕಷ್ಟದಲ್ಲಿದ್ದ ರೈತರ ಪರವಾಗಿ ಸರ್ಕಾರ ನಿಂತಿದ್ದು 7 ಗಂಟೆ ತ್ರೀ ಫೇಸ್ ಕರೆಂಟ್ ಕೊಡೋದಾಗಿ ಘೋಷಿಸಿದೆ, ಸರ್ಕಾರ ಹೇಳಿದಂತೆ 7 ಗಂಟೆ ವಿದ್ಯುತ್ ಕೊಡುತ್ತಾ ಇಲ್ಲ ಇದು ಬರೀ ಬರವಸೆಯಾಗಿಯೇ ಉಳಿಯುತ್ತಾ ಎಂಬುದನ್ನ ಕಾದುನೋಡಬೇಕಿದೆ….