ಮೈಸೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಮುಂದುವರಿಯಲಿವೆ. ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ, ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂಬ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಹಾಗೂ ಜೆಡಿಎಸ್ ಈ ಪ್ರಕರಣದಲ್ಲಿ ಕಾಂಗ್ರೆಸ್ನದ್ದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸುತ್ತಿದ್ದಾರೆ. ಆದರೆ, ದೂರು ನೀಡಿರುವವರು ಯಾರು? ಸರ್ಕಾರವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುವುದಿಲ್ಲ. ಕಾನೂನು ರೀತಿ ಕೆಲಸ ಮಾಡುವ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಒಪ್ಪಿ ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದರು.
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ದೇವೇಗೌಡರ ಕುಟುಂಬವನ್ನು ನಾಶ ಮಾಡುವುದರಲ್ಲಿ ಯಶಸ್ಸು ಕಂಡಿರುವ ಕಾಂಗ್ರೆಸ್ ಈಗಯಡಿಯೂರಪ್ಪ ಅವರನ್ನು ನಾಶ ಮಾಡಲು ಹೊರಟಿದೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಈ ನೆಲದ ಕಾನೂನನ್ನು ನಾವು ಗೌರವಿಸುತ್ತೇವೆ. ಕಾನೂನು ಹೇಳಿದಂತೆ ನಡೆದುಕೊಳ್ಳುತ್ತೇವೆ ಹಾಗೂ ಕಾನೂನನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ದರ್ಶನ್ ಪ್ರಕರಣದಲ್ಲಿ ಪ್ರಭಾವಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅದು ಕೇವಲ ಸುದ್ದಿ. ನನ್ನನ್ನು ಭೇಟಿಯಾಗಲು ಯಾರೂ ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದರು