ಬೆಂಗಳೂರು: ಸಿಎಂ ಇಬ್ರಾಹಿಂ (CM Ibrahim) ಅವರನ್ನು ಜೆಡಿಎಸ್‌ ಪಕ್ಷದಿಂದಲೇ ಅಮಾನತುಗೊಳಿಸಿರುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು (HD DeveGowda) ಆದೇಶ ಹೊರಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ದೊಡ್ಡಗೌಡರು ಈ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ (BJP-JDS Alliance) ವಿಚಾರದಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದರೂ ತಾನೇ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಪ್ರತ್ಯೇಕ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಅಮಾನತು ಹಿನ್ನೆಲೆ:

ಪಕ್ಷದ ಹಿತಕ್ಕಾಗಿ ಬಿಜೆಪಿ ಜತೆ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸರ್ವಾನುಮತದ ಅಧಿಕಾರ ನೀಡಲಾಗಿತ್ತು ಹಾಗೂ ಮೈತ್ರಿಯ ಬಗ್ಗೆ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲು ರಾಷ್ಟ್ರೀಯ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ಪೂರ್ಣ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ನಿರ್ಣಯ ಕೈಗೊಳ್ಳಲು ನಡೆದ ಎಲ್ಲಾ ಸಭೆಗಳಲ್ಲಿ ಇಬ್ರಾಹಿಂ ಅವರು ಹಾಜರಿದ್ದರು. ಆದರೂ ಅವರು ಪಕ್ಷಕ್ಕೆ ಹಾನಿ ಉಂಟು ಮಾಡುವ ವಿರೋಧಾಭಾಸದ ಹೇಳಿಕೆಗಳನ್ನು ನೀಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳದ ರಾಜ್ಯಾಧ್ಯಕ್ಷರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಪಕ್ಷದ ಸಂವಿಧಾನದ ಆರ್ಟಿಕಲ್‌ 10ರ ಅನ್ವಯ ಕಳೆದ ಅಕ್ಟೋಬರ್‌ 19ರಂದು ವಿಸರ್ಜನೆ ಮಾಡಿ ರಾಷ್ಟ್ರೀಯ ಅಧ್ಯಕ್ಷರು ಆದೇಶ ಹೊರಡಿಸಿದ್ದರು.

ತದ ನಂತರ ಇಬ್ರಾಹಿಂದ ಅವರು ನವೆಂಬರ್‌ 7ರಂದು ʼಚಿಂತನ ಮಂಥನʼ ಎನ್ನುವ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಮಾನಾಂತರ ಸಭೆ ಕರೆದು ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಸುಳ್ಳು ಆರೋಪಗಳನ್ನು ಮಾಡಿದ್ದರು.

ನವೆಂಬರ್‌ 7ರಂದು ನೀಡಿದ ಹೇಳಿಕೆಯಲ್ಲಿ, ನಾನಿನ್ನೂ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಮುಂದುವರಿದಿದ್ದೇನೆ ಎಂದು ತಿಳಿಸಿ, ಬಿಜೆಪಿ ಜತೆ ಮೈತ್ರಿಗೆ ಒಲವು ಇರುವವರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿರುತ್ತಾರೆ.

ನವೆಂಬರ್‌ 15ರಂದು ಕೇರಳದ ತಿರುವನಂತಪುರದಲ್ಲಿ ಸಿ.ಕೆ.ನಾನು ಅವರ ನೇತೃತ್ವದಲ್ಲಿ ಪಕ್ಷ ವಿರೋಧಿ ಸಭೆಯನ್ನು ನಡೆಸಿ, ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಇವೆಲ್ಲಾ ನಡವಳಿಕೆ, ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಅವರು ಪಕ್ಷದ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದ್ದಾರೆ.

 

Share.