ತುಮಕೂರು:ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದ್ದರೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಹಮತಕ್ಕೆ ಬರಲು ಪರದಾಡಿದ್ದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತುಮಕೂರಿನಲ್ಲಿ ನಡೆದ ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಗಾದಿ ವಿಚಾರ ಮತ್ತೆ ಪ್ರಸ್ತಾಪವಾಗಿದೆ.
ಈ ಸಮಾರಂಭದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನನಗೆ ಮುಖ್ಯಮಂತ್ರಿ ಆಗುವ ಅಭಿಲಾಷೆ ಇಲ್ಲ. ಆದರೆ ನಮ್ಮ ಸಮಾಜದಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಎನ್ನುವುದು ನಮ್ಮ ಆಸೆ. ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎನ್ನುವ ಮೂಲಕ ಅವರು ಮುಂದಿನ ಮುಖ್ಯಮಂತ್ರಿ ಕುರಿತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

