ಬೆಂಗಳೂರು: ಕರ್ನಾಟಕದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಸಿನಿಮಾ ನಟ ನಟಿಯರು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಅದರಂತೆ ಇಂದು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಸಿನಿಮಾ ನಟ ನಟಿಯರು ಸಾಥ್ ಕೊಟ್ಟಿದ್ದಾರೆ. ನಮ್ಮ ಕನ್ನಡಾಂಬೆಗೆ ಅವಮಾನ ಮಾಡಿದ ನೀಚ ಎಂಇಎಸ್ ಅವರಿಗೆ ತಕ್ಕ ಪಾಠ ಕಲಿಸಬೇಕು. ನಿರಂತರವಾಗಿ ಕನ್ನಡಿಗರ ಭಾವನೆ ಜೊತೆ ಆಟವಾಡುತ್ತಿರುವ ಅವರ ಅಟ್ಟಹಾಸ ಮುರಿಯಲೇ ಬೇಕು.
ಹೀಗಾಗಿ ರಾಜ್ಯ ಸರ್ಕಾರ ಈ ಸಂಬಂಧ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ನಿಷೇಧಿಸಲು ಮುಂದಾಗಬೇಕು. ಕನ್ನಡಿಗರ ಶಕ್ತಿ ಏನೆಂಬುವುದನ್ನು ಅವರಿಗೆ ಅರ್ಥ ಮಾಡಿಸಲೇಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರತಿಭಟನೆಯಲ್ಲಿ ಹಿರಿಯ ಕಿರುತೆರೆ ನಟ ದೇವರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಭಾಗಿಯಾಗಿದರು.
