ಮಳೆ ಕೊರತೆ, ವೈರಸ್, ಚೆಂಡು ಮುದುರು, ಕರಿಹೇನು ಮತ್ತು ಬೂದಿ ರೋಗದಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿಂದ ಸಹಸ್ರಾರು ಎಕರೆಯಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ ಫಲ ಕೈಗೆ ಬರುವ ಸಮಯದಲ್ಲಿಕಾಲುವೆಗೆ ನೀರು ಸ್ಥಗಿತವಾಗುವ ಸ್ಥಿತಿ, ರೋಗದ ಭಯದಿಂದ ಬೆಳೆಗಾರರ ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲಎಂಬ ಕೊರುಗು ಕಾಡುತ್ತಿದೆ.
ಬಿತ್ತನೆಯಾದ ಮೆಣಸಿನಕಾಯಿ ಎರಡೂವರೆಯಿಂದ ನಾಲ್ಕು ಅಡಿ ಎತ್ತರ ಬೆಳೆದು ನೀರಿಗಾಗಿ ಬಾಯಿ ತೆರೆಯಿತು. ಆಕಾಶ ಮಳೆ ಬಿತ್ತುವ ಬದಲು ಬೆಂಕಿ ಬಿಸಿಲು ಮತ್ತು ಬರ ಬಿದ್ದಿತು. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಣೆಗೊಳ್ಳದೇ ಎಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗೆ ನೀರು ಕಡಿತಗೊಳಿಸಲು ನ. 20ರವರೆಗೆ ಗಡುವು ನೀಡಿದೆ.
ಈ ವರ್ಷ ಲಾಭ ಪಡೆಯುವ ನಿರೀಕ್ಷೆಯಿಂದ ತಾಲೂಕಿನಲ್ಲಿ ಒಟ್ಟು 15 ರಿಂದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ತಲೆ ಎತ್ತಿದೆ. ರೈತರು ಇಂಪ್ರೂವ್ಡ್ ತಳಿಯ ಮೆಣಸಿನಕಾಯಿ ಬೀಜದಿಂದ ನರ್ಸರಿಯಲ್ಲಿ ಬೆಳೆಸಿ, ನಂತರ ಜಮೀನಿನಲ್ಲಿ ಸಸಿ ನಾಟಿ ಮಾಡಿದ್ದರು. ಆದರೆ ಮಳೆ ಇಲ್ಲದೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಮೆಣಸಿಕಾಯಿ ಬೆಳೆಯಲ್ಲಿ ಚೆಂಡು ಮುದುರು, ವೈರಸ್ ರೋಗ ಹಾಗೂ ಕರಿಹೇನುಗಳು ಕಾಣಿಸಿಕೊಂಡಿದೆ. ಹೀಗಾಗಿ ರೈತರನ್ನು ಚಿಂತೆ ಕಾಡುತ್ತಿದೆ.
ತೋಟಗಾರಿಕೆ ಇಲಾಖೆಯ ಬೆಳೆ ವಿಮೆಯ ಬಗ್ಗೆ ಪ್ರಚಾರ ನಡೆಸಲಾಗಿದೆ ಎಂದು ಹೇಳಿದೆ. ಆದರೆ ತಾಲೂಕಿನಲ್ಲಿ2000ಹೆ. ರೈತರಿಗೆ ಮಾತ್ರ ತಲುಪಿದೆ. ಉಳಿದೆಡೆ ಜಾಗೃತಿ ಶೂನ್ಯವಾಗಿದೆ. ಪ್ರಕೃತಿ ವಿಕೋಪದಿಂದ ನಷ್ಟ ಹೊಂದಿದ ಬೆಳೆಗೆ ಮಾತ್ರ ವಿಮೆ ಹಣ ಧಕ್ಕುವ ನೀತಿ ಇದೆ. ಆದರೆ ಮಳೆ ಇಲ್ಲದೆ ಬರದಿಂದ ಬೆಳೆ ರೋಗಕ್ಕೆ ತುತ್ತಾಗಿದೆ ಹಾಗೂ ಪ್ರಾಕೃತಿಕ ವೈಪರೀತ್ಯ ಎಂದು ಪರಿಗಣಿಸಿ ಸರಕಾರ ಪರಿಹಾರ ಒದಗಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.