ಬೆಂಗಳೂರು:- ಸಂತ್ರಸ್ತೆಗೆ ಆರೋಪಿಯೇ ಜೀವನಾಧಾರ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್ ಪೀಠವು, ಬಾಲ್ಯವಿವಾಹ ಕಾಯಿದೆಯಡಿ ತನಿಖೆಗೆ ಗುರಿಯಾಗಿದ್ದ ವ್ಯಕ್ತಿ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸಂತ್ರಸ್ತೆಯ ಆಧಾರ್ ಕಾರ್ಡ್ ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಸಂತ್ರಸ್ತೆಯನ್ನು ವಿವಾಹವಾದ ಸಂದರ್ಭದಲ್ಲಿ 17 ವರ್ಷ 8 ತಿಂಗಳಾಗಿತ್ತು. ಪ್ರಸ್ತುತ 22 ವರ್ಷ ವಯಸ್ಸಾಗಿದೆ. ಜತೆಗೆ, ಅರ್ಜಿದಾರರನ್ನೇ ಆಕೆ ಮತ್ತು ಆಕೆಯ ಮಗು ಜೀವನಾಧಾರವನ್ನಾಗಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಸಂತ್ರಸ್ತೆ(ಪತ್ನಿ)ಯ ಪ್ರಮಾಣಪತ್ರ ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರನ್ನು ಶಿಕ್ಷೆಗೆ ಗುರಿಪಡಿಸಿದಲ್ಲಿ ಸಂತ್ರಸ್ತೆ ಮತ್ತು ಆಕೆಯ ಮಗುವನ್ನು ಸಂಕಷ್ಟಕ್ಕೆ ದೂಡಿದಂತಾಗಲಿದೆ. ಇದು ಕಾನೂನಿನ ದುರ್ಬಳಕೆಯಾಗಲಿದೆ. ಆದ ಕಾರಣ ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.