ಬೆಂಗಳೂರು:- ನಗರ ಜಿಲ್ಲೆಯ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ ಘಟನೆ ಜರುಗಿದೆ.
ಆನೇಕಲ್ನ ಪಂಪ್ಹೌಸ್ ನಿವಾಸಿಯಾಗಿದ್ದ ಸುಮಲತಾ ಎಂಬುವವರು ಇಂದು ಬೆಳಗ್ಗೆ 10.30ಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಯಿಂದ ನಾರ್ಮಲ್ ಡೆಲಿವರಿಗೆ ಟ್ರೈ ಮಾಡಿದ್ದರು. ಆದರೆ, ಈ ವೇಳೆ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರಂತೆ.
ಇನ್ನು ನಾರ್ಮಲ್ ಹೆರಿಗೆ ಮಾಡಿಸಲು ವೈದ್ಯರು ಪ್ರಯತ್ನಪಟ್ಟಿದ್ದಾರೆ. ಆದರೆ, ಮಗು 4.5 ಕೆ.ಜಿ ತೂಕ ಇದ್ದಿದ್ದರಿಂದ ನಾರ್ಮಲ್ ಡೆಲಿವರಿ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಗುವನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ದರು. ಮಗುವನ್ನು ಹೊರತೆಗೆಯಲು ಆಗದಿದ್ದಾಗ ಸಿಸೇರಿಯನ್ ಮಾಡಿದ್ದರು. ಹಸುಗೂಸನ್ನು ಹೊರ ತೆಗೆದಾಗ ದೇಹದ ತುಂಬೆಲ್ಲಾ ಗಾಯವಾಗಿದೆ. ಬಳಿಕ ಹಸುಗೂಸು ಮೃತಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರಂತೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.